ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಕರೆ: ನಿಟ್ಟುಸಿರು ಬಿಟ್ಟ ಪೋಷಕರು

Photo: PTI
ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಸೇರಿದಂತೆ 6 ಖಾಸಗಿ ಶಾಲೆಗಳಲ್ಲಿ ಏಕಕಾಲದಲ್ಲಿ ಇ-ಮೇಲ್ ಮುಖಾಂತರ ಬಾಂಬ್ ಇಟ್ಟಿರುವುದಾಗಿ ಶುಕ್ರವಾರ ಕರೆ ಬಂದಿದ್ದು, ಸ್ಥಳೀಯ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳ ಪರಿಶೀಲಿಸಿದ ನಂತರ ಇದೊಂದು ಹುಸಿ ಬಾಂಬ್ ಕರೆ ಎಂದು ದೃಢಪಡಿಸಿದ್ದಾರೆ.
ಬೆಂಗಳೂರು ನಗರದ ಐದು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಶಾಲೆಗೆ ಬೆದರಿಕೆ ಇ-ಮೇಲ್ ಬಂದಿದೆ. ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ, ವರ್ತೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರಿನ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರದ ಇಂಡಿಯನ್ ಪಬ್ಲಿಕ್ ಸ್ಕೂಲ್, ಹೆಬ್ಬಗೋಡಿ ಎಬಿನೈಜರ್ ಶಾಲೆಗಳಿಗೆ ಶುಕ್ರವಾರ ಬೆಳಗ್ಗೆ 11.09ಕ್ಕೆ ಇ-ಮೇಲ್ ಸಂದೇಶ ರವಾನೆಯಾಗಿದೆ.
ಮಲಿಂದ ಬೊರೊನ್ ಇ-ಮೇಲ್ ಅಕೌಂಟ್ನಿಂದ ಮೇಲ್ ಬಂದಿದ್ದು, ಈ ಮೇಲ್ ಸಂದೇಶದಲ್ಲಿ "ಪ್ರಬಲವಾದ ಬಾಂಬ್ ಅನ್ನು ನಿಮ್ಮ ಶಾಲೆಯಲ್ಲಿ ಇಡಲಾಗಿದೆ. ಇದು ಎಚ್ಚರಿಕೆ. ತಮಾಷೆಯಲ್ಲ. ಮತ್ತೊಮ್ಮೆ ಹೇಳುತ್ತಿದ್ದೇವೆ, ಇದು ತಮಾಷೆಯಲ್ಲ. ಅತ್ಯಂತ ಪ್ರಬಲವಾದ ಬಾಂಬ್ ಆಗಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ. ನಿಮ್ಮನ್ನೂ ಸೇರಿದಂತೆ ನೂರಾರು ಜೀವಗಳು ಸಂಕಷ್ಟಕ್ಕೆ ಸಿಲುಕಬಹುದು. ವಿಳಂಬ ಮಾಡಬೇಡಿ. ಮುಂದಿನದ್ದೆಲ್ಲ ನಿಮ್ಮ ಕೈಯಲ್ಲೇ ಇದೆ" ಎಂದು ಇ-ಮೇಲ್ನಲ್ಲಿ ಬರೆಯಲಾಗಿದೆ.
ಸುದ್ದಿ ತಿಳಿದ ತಕ್ಷಣ ಬಾಂಬ್ ನಿಗ್ರಹ ದಳ, ಶ್ವಾನದಳ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶಾಲೆಯಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ ಸತತ ಮೂರು ಗಂಟೆ ತಪಾಸಣೆ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ತಪಾಸಣೆಯಿಂದ ಇದೊಂದು ಹುಸಿ ಬಾಂಬ್ ಕರೆ ಎಂದು ದೃಢಪಟ್ಟಿದೆ.
ಶಾಲೆಗಳಿಗೆ ಬೆದರಿಕೆ ಇ-ಮೇಲ್ ಬಂದ ಕೂಡಲೇ ಸ್ಥಳೀಯ ಪೊಲೀಸರು ಆರು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರ್ರಿಯ ದಳ ಮತ್ತು ಪೊಲೀಸರು ಸತತ ಮೂರು ಗಂಟೆ ಶೋಧ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಸುಬ್ರಮಣೇಶ್ವರರಾವ್, 'ಇದೊಂದು ಹುಸಿ ಬಾಂಬ್ ಕರೆ. ಯಾರೂ ಸಹ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ಎಲ್ಲಾ ಶಾಲೆಗಳ ಆಡಳಿತ ಮಂಡಳಿಗಳ ಜತೆ ನಾವು ಸಂಪರ್ಕದಲ್ಲಿದ್ದೇವೆ. ಶೋಧ ಮಾಡುವ ಸಲುವಾಗಿ ಪೊಲೀಸರು ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಇದರಿಂದ ಭಯ ಭೀತರಾಗುವುದು ಬೇಡ' ಎಂದು ಕಿವಿಮಾತು ಹೇಳಿದ್ದಾರೆ.
ಬಹುತೇಕ ಶಾಲೆಗಳಲ್ಲಿ ಪರೀಕ್ಷೆ: ಶುಕ್ರವಾರ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿತ್ತು. ಹೀಗಾಗಿ ಹುಸಿ ಬಾಂಬ್ ಕರೆಯಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಇದರ ನಡುವೆ ಇ ಮೇಲ್ ಜಾಡು ಹಿಡಿದು ಬೆಂಗಳೂರು ಸೈಬರ್ ತಜ್ಞರ ತಂಡ ತನಿಖೆ ನಡೆಸುತ್ತಿದೆ.
ಆತಂಕಕ್ಕೆ ಒಳಗಾದ ಪೋಷಕರು: ಬೆಂಗಳೂರಿನ ಆರು ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಆರು ಶಾಲೆಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ಶಾಲೆಗಳಿಂದ ಹೊರ ಬರುತ್ತಿದ್ದ ದೃಶ್ಯ ಕಂಡುಬಂತು.
ಹುಸಿ ಬಾಂಬ್ ಬೆದರಿಕೆ ಬಗ್ಗೆ ಕಿವಿಗೊಡಬೇಡಿ: ಬಿ.ಸಿ.ನಾಗೇಶ್
ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿ ಇ-ಮೇಲ್ ಮಾಡಿದ್ದಾರೆ. ಇದೊಂದು ಹುಸಿ ಬಾಂಬ್ ಬೆದರಿಕೆ. ಇದಕ್ಕೆ ಮಹತ್ವ ಕೊಡಬಾರದು. ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಭೀತಿಗೆ ಒಳಗಾಗುತ್ತಾರೆ. ಬೆದರಿಕೆ ಇ-ಮೇಲ್ ಅನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತದೆ. ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮ ಕೂಡ ಜರುಗಿಸಲಾಗುತ್ತದೆ. ಈ ಹುಸಿ ಬಾಂಬ್ ಬೆದರಿಕೆಗಳಿಗೆ ಯಾರೂ ಕಿವಿಗೊಡಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನವಿ ಮಾಡಿದ್ದಾರೆ.
ಶಾಂತಿ ಕದುಡುವ ಹುನ್ನಾರ: ಸಿಎಂ ಬೊಮ್ಮಾಯಿ
ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ರೀತಿಯಲ್ಲೂ ತನಿಖೆ ನಡೆಯುತ್ತಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಕೂಡ ಶಾಂತಿ ಕದಡುವ ಹುನ್ನಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿಶೇಷ ತಂಡ ರಚನೆ: ಕಮಲ್ ಪಂತ್
ಬೆದರಿಕೆ ಸಂದೇಶ ರವಾನಿಸಿರುವ ಇ–ಮೇಲ್ ಐಡಿ ಆಧರಿಸಿ ತನಿಖೆ ಆರಂಭಿಸಲಾಗಿದೆ. ಇದನ್ನು ಕಳುಹಿಸಿದವರು ಯಾರು ಎಂಬುದನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: 37 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ, ಮೂವರು ಆರೋಪಿಗಳ ಬಂಧನ







