ಗೃಹ ಸಚಿವರು ಸರಿಯಾಗಿ ತಿಳಿದು ಮಾತಾಡಬೇಕು: ಶೋಭಾ ಕರಂದ್ಲಾಜೆ

ಉಡುಪಿ : ಗೃಹಸಚಿವ ಅರಗ ಜ್ಞಾನೇಂದ್ರ ಜವಾಬ್ದಾರಿಯುತ ಜಾಗದಲ್ಲಿ ಇರುವವರು. ಎಲ್ಲವನ್ನು ಸರಿಯಾಗಿ ತಿಳಿದುಕೊಂಡು ಮಾತಾಡಬೇಕು. ಚಂದ್ರು ಕೊಲೆ ವಿಚಾರದಲ್ಲಿ ಅವರು ಈಗಾಗಲೇ ಕ್ಷಮೆ ಯಾಚನೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ ಖೈದಾ ವಿಡಿಯೋ ಹೇಳಿಕೆಗೆ ಸಿದ್ದರಾಮಯ್ಯ ಬೆಂಬಲ ಇದೆಯೇ ಹಾಗೂ ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಬೆಂಬಲ ಇದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಈ ಕುರಿತು ಚರ್ಚೆ ಆಗಬೇಕು ಎಂದರು.
ಉಡುಪಿಯಿಂದ ಅರಂಭವಾದ ಹಿಜಾಬ್ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ. ನಮ್ಮ ದೇಶಕ್ಕಿಂತ ಮೊದಲು ಪಾಕಿಸ್ಥಾನ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಇದರ ಬಗ್ಗೆ ಚರ್ಚೆ ಆರಂಭವಾಗಿತ್ತು. ಇದು ಬೇಕೆ ಬೇಡವೆ ಎಂಬುವುದನ್ನು ಆ ಸಮುದಾಯ ಯೋಚಿಸಬೇಕು. ಇದೀಗ ವಿವಾದ ವ್ಯಾಪಾರ ಕ್ಷೇತ್ರಕ್ಕೂ ಕಾಲಿಟ್ಟಿದೆ. ಎಲ್ಲಾ ಧರ್ಮದವರು ಭಾರತದಲ್ಲಿ ಒಟ್ಟಾಗಿರಬೇಕು ಎಂಬುವುದು ನಮ್ಮ ಅಪೇಕ್ಷೆ. ಹೈಕೋರ್ಟ್ ತೀರ್ಪು ಮುರಿಯುವವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದರು.
ಮುಸ್ಲಿಮ್ ಧರ್ಮದ ಬಡವರನ್ನು ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ಆಗುತ್ತಿದೆ. ಬಡ ಹೆಣ್ಣು ಮಕ್ಕಳನ್ನು ಮುಂದಿಟ್ಟು ಧರ್ಮ ಸಂಘರ್ಷ ಮಾಡುವರು ಯೋಚನೆ ಮಾಡಬೇಕು. ಮಂಡ್ಯದ ಮುಸ್ಕಾನ್‌ಗೆ ಅಲ್ ಖೈದಾ ಬೆಂಬಲ ನೀಡಿದೆ. ಮುಸ್ಕಾನ್ ಬಗ್ಗೆ ಆಲ್ ಖೈದಾಕ್ಕೆ ಮಾಹಿತಿ ಕೊಟ್ಟ ಸಂಘಟನೆ ಯಾವುದು? ಯಾವ ಸಂಘಟನೆ ಇದರ ಹಿಂದೆ ಇದೆ ಎಂಬುವುದು ಕೂಡಾ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಅಲ್ ಖೈದಾ ಹೇಳಿಕೆಗೆ ಆರೆಸೆಸ್ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಭಾರತದ ಸಂವಿದಾನದಲ್ಲಿ ಮುಖ್ಯ ಮಂತ್ರಿಯಷ್ಟೇ ವಿರೋಧ ಪಕ್ಷದ ನಾಯಕರಿಗೂ ಜವಾಬ್ದಾರಿ ಇದೆ. ಹಿಟ್ ಲಿಸ್ಟ್‌ನಲ್ಲಿರುವ ಭಯೋತ್ಪಾದಕ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಆರೆಸ್ಸೆಸ್ ಜೊತೆ ಹೋಲಿಕೆ ಮಾಡುತ್ತಾರೆಂದರೆ ನನಗೆ ಹೇಳಲು ಏನೂ ಉಳಿದಿಲ್ಲ. ಕಾಂಗ್ರೆಸ್ ಸಿದ್ದರಾಮಯ್ಯನವರನ್ನು ನಿಮ್ಹಾನ್ಸ್‌ಗೆ ಕಳಿಸಿದರೆ ಕಾಂಗ್ರೆಸ್ ಉಳಿಯುತ್ತದೆ. ಸಿದ್ದರಾಮಯ್ಯ ನಿಮ್ಮೊಂದಿಗೆ ದಾಖಲಾಗಿದ್ದರೆ ಕಾಂಗ್ರೆಸ್ ನಾಶ ಆಗುತ್ತದೆ ಎಂದು ಟೀಕಿಸಿದರು.
ರಾಜ್ಯಾಧ್ಯಕ್ಷ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶೋಭಾ, ಈ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಯಾವುದೂ ಇಲ್ಲ. ನಾನು ಮಂತ್ರಿಯಾಗಿ ಚೆನ್ನಾಗಿದ್ದೇನೆ ಎಂದು ಹೇಳಿ ನಿರ್ಗಮಿಸಿದರು.







