ಬೆಳ್ತಂಗಡಿ: ಅರಣ್ಯಾಧಿಕಾರಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು
ಅಕ್ರಮ ಮರ ಸಾಗಾಟ ಪ್ರಕರಣಕ್ಕೆ ಹೊಸತಿರುವು

ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ದ.ಕ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಹಾಗೂ ಉಡುಪಿ ಅರಣ್ಯ ಸಂಚಾರಿ ದಳ ವಲಯಾರಣ್ಯಾಧಿಕಾರಿ ಸಂಧ್ಯಾ ಅವರ ವಿರುದ್ಧ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಐತ ಎಂಬವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ.
ಡಿ.10ರಂದು ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಐತ ಕೊರಗ ಅವರು ಡಿ.9ರಂದು ಮರಗಳನ್ನು ಕಡಿದು ಹೊರಗಡೆ ದಾಸ್ತಾನು ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ಕಾನೂನು ರೀತಿಯಲ್ಲಿ ವಶ ಪಡಿಸಿಕೊಂಡಿದ್ದಾರೆ.
ಡಿ.10ರಂದು ಯಾವುದೇ ನೋಟೀಸು ನೀಡದೆ ಅರಣ್ಯ ಇಲಾಖೆಯ ಅಧಿಕಾರಿಗಳು ತನ್ನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಾಯಿ ಹಾಗೂ ತನ್ನನ್ನು ವಿಚಾರಿಸಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವುದಾಗಿ ತಿಳಿಸಿ, 5 ಲಕ್ಷ ರೂ. ಬೇಡಿಕೆ ಇಟ್ಟಿದ್ದು ತನ್ನ ಬಳಿ ಇಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಜಾತಿ ನಿಂದನೆ ಮಾಡಿ ಮರಗಳನ್ನು ಡಿಪೋಗೆ ಸಾಗಾಟ ಮಾಡಿರುತ್ತಾರೆ ಎಂದು ಐತ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಇದೀಗ ಹಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ 447, 506ಐಪಿಸಿ ಮತ್ತು ಕಲಂ3(1)(s) ಹಾಗೂ ಎಸ್.ಸಿ ಎಸ್.ಟಿ ಆಕ್ಟ್ ನಂತೆ ಪ್ರಕರ ದಾಖಲಿಸಲಾಗಿದೆ.
ಅಕ್ರಮ ಮರ ಸಾಗಾಟಕ್ಕೆ ಇದೀಗ ಹೊಸ ತಿರುವು
ಬೆಳ್ತಂಗಡಿಯಲ್ಲಿ ಸಂಚಲನ ಮೂಡಿಸಿದ್ದ ಈ ಅಕ್ರಮ ಮರ ಸಾಗಾಟ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗುವುದರೊಂದಿಗೆ ಹೊಸ ತಿರುವು ಸಿಕ್ಕಿದಂತಾಗಿದೆ.
ಕೋಟ್ಯಾಂತರ ರೂ. ಬೆಲೆ ಬಾಳುವ ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮರಗಳನ್ನು ವಶಪಡಿಸಿಕೊಂಡಿದ್ದರು.
ಬಾಲಕೃಷ್ಣ ಶೆಟ್ಟಿ ಎಂಬವರ ಬದ್ಯಾರಿನಲ್ಲಿರುವ ಮಿಲ್ಲಿಗೂ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದರು. ಅದರ ಬೆನ್ನಲ್ಲಿಯೇ ದಾಳಿ ನಡೆಸಿದ್ದ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಅವರನ್ನು ಬೀದರಿಗೆ ವರ್ಗಾವಣೆ ಮಾಡುವಂತೆ ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರ ಬಹಿರಂಗಗೊಂಡು ಭಾರೀ ವಿವಾದಗಳಿಗೆ ಕಾರಣವಾಗಿ ಬಳಿಕ ಸಂಧ್ಯಾ ಅವರನ್ನು ಬೀದರಿಗೆ ವರ್ಗಾವಣೆಯೂ ಮಾಡಲಾಗಿತ್ತು. ಅವರು ಅದಕ್ಕೆ ನ್ಯಾಯಾಲಯದಿಂದ ತಡೆಯನ್ನು ತಂದಿದ್ದರು.
ಇದೀಗ ಘಟನೆ ನಡೆದು ನಾಲ್ಕು ತಿಂಗಳ ಬಳಿಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.