ಬೇರೆ ಕ್ಷೇತ್ರದ ಮತಪತ್ರ ಬಳಸಿದ್ದರೆ ತಪ್ಪಿಲ್ಲ: ಹೈಕೋರ್ಟ್

ಬೆಂಗಳೂರು, ಎ.8: ಚುನಾವಣೆಯಲ್ಲಿ ಒಂದು ಕ್ಷೇತ್ರದ ಮತಪತ್ರಗಳು ಬೇರೊಂದು ಕ್ಷೇತ್ರದಲ್ಲಿ ಬಳಕೆಯಾಗಿವೆ ಎಂಬ ಕಾರಣಕ್ಕೆ ಆ ಮತಗಳನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಹಾಸನ ತಾಲೂಕಿನ ಕಾರ್ಲೆ ಗ್ರಾಪಂ ಚುನಾವಣೆಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಪ್ರಕರಣವೇನು: 2021ರಲ್ಲಿ ಕಾರ್ಲೆ ಗ್ರಾಪಂಗೆ ಚುನಾವಣೆ ನಡೆದಿತ್ತು. ಅಭ್ಯರ್ಥಿ ಪ್ರಭಾಮಣಿ 232 ಮತಗಳಿಸಿದ್ದರು. ಆದರೆ, ಬೇರೊಂದು ಕ್ಷೇತ್ರದ 4 ಮತಪತ್ರ ಈ ಕ್ಷೇತ್ರದಲ್ಲಿ ಬಳಕೆಯಾಗಿದ್ದವು. ಮತಪತ್ರಗಳನ್ನು ಬಳಸಿ ಹಾಕಿದ ನಾಲ್ಕು ಮತಗಳು ಹೇಮಲತಾ ಅವರಿಗೆ ಚಲಾವಣೆಯಾಗಿದ್ದವು. ಆದರೆ, ಬೇರೆ ಕ್ಷೇತ್ರದ ಮತಪತ್ರ ಎಂಬ ಕಾರಣಕ್ಕೆ ಅವುಗಳನ್ನು ಚುನಾವಣಾಧಿಕಾರಿಗಳು ಪರಿಗಣಿಸಿರಲಿಲ್ಲ.
ಇದರಿಂದ, ಹೇಮಲತಾ ಅವರು ಚುನಾವಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಮಂಡಳಿಯು ಆ 4 ಮತಪತ್ರಗಳನ್ನು ಪರಿಗಣಿಸಿ, ಹೇಮಲತಾ ಗೆಲುವು ಎಂದು ಘೋಷಿಸಿತ್ತು. ಈ ಆದೇಶ ರದ್ದು ಕೋರಿ ಪ್ರಭಾಮಣಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.





