61 ಸಾಹಿತಿಗಳಿಗೆ ಜೀವ ಬೆದರಿಕೆ: ಎಲ್ಲರಿಗೂ ತಕ್ಷಣ ಭದ್ರತೆ ಕಲ್ಪಿಸಲು ಕುಮಾರಸ್ವಾಮಿ ಆಗ್ರಹ

ಕುಮಾರಸ್ವಾಮಿ
ಬೆಂಗಳೂರು, ಎ. 8: ‘ನಾನು, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಸೇರಿದಂತೆ 61 ಮಂದಿ ಸಾಹಿತಿಗಳಿಗೆ ‘ಸಹಿಷ್ಣು ಹಿಂದೂ' ಎಂಬ ಹೆಸರಿನಲ್ಲಿ ಒಡ್ಡಲಾಗಿರುವ ಜೀವ ಬೆದರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಇಂತಹ ಬೆದರಿಕೆ ಪತ್ರವನ್ನು ಲಘುವಾಗಿ ಪರಿಗಣಿಸಬೇಡಿ. ಕುಂ.ವೀರಭದ್ರಪ್ಪ ಸೇರಿ ಜೀವ ಬೆದರಿಕೆ ಒಡ್ಡಲಾಗಿರುವ ಎಲ್ಲ ಸಾಹಿತಿಗಳಿಗೆ ತಕ್ಷಣವೇ ಸರಕಾರವು ರಕ್ಷಣೆ ಕೊಡಬೇಕು. ನನಗೆ ಈ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಅಂಜಿಕೆ ಇಲ್ಲ. ದೇವರನ್ನು ನಾನು ನಂಬಿರುವೆ. ನನ್ನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಂಜಿ ಸತ್ಯವನ್ನು ಮರೆಮಾಚಲಾರೆ' ಎಂದು ತಿಳಿಸಿದರು.
ಹಣೆಯಲ್ಲಿ ಬರೆದಿರುವುದನ್ನು ತಿದ್ದಲು ಇವರಿಂದ ಆಗುವುದಿಲ್ಲ. ನೇರವಾಗಿ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಡಾ.ಎಂ.ಎಂ.ಕಲಬುರ್ಗಿ ಸೇರಿದಂತೆ ಕೆಲವರನ್ನು ಹತ್ಯೆ ಮಾಡಿದ ಉದಾಹರಣೆ ನಮ್ಮ ಮುಂದೆ ಇದೆ. ರಾಜ್ಯದಲ್ಲಿ ಮತ್ತೆ ಅಂಥ ಘಟನೆಗಳು ಮರುಕಳಿಸಬಾರದು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.
ಅಮಿತ್ ಶಾಗೆ ಇಂಗ್ಲಿಷ್ ಬರಲ್ವ?: ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಹಿಂದಿ ಹೇರಿಕೆ ವಿರುದ್ಧದ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಕನ್ನಡ ನಾಡಿನಲ್ಲಿ ಕನ್ನಡ ದೊಡ್ಡದು. ಇಲ್ಲಿ ಹಿಂದಿ ಹೇರಿಕೆ ನಡೆಯಲ್ಲ. ಕನ್ನಡ ಉಳಿಸಬೇಕು ಎಂದು ಹೇಳಿದರು.







