ಚಿಕ್ಕಮಗಳೂರು: ಲಂಚ ಬೇಡಿಕೆ ಆರೋಪ; ಎಸಿಬಿ ಬಲೆಗೆ ಬಿದ್ದ ಸಿಡಿಎ ಅಧಿಕಾರಿ

ಶಿವಕುಮಾರ್
ಚಿಕ್ಕಮಗಳೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಡಾವಣೆಯೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲಕರಿಂದ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಲಂಚ ಸ್ವೀಕರುಸುವ ವೇಳೆ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಶಿವಕುಮಾರ್ ಜಮೀನು ಮಾಲಕರಿಂದ 2ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ತಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ನೂತನ ಲೇಔಟ್ ನಿರ್ಮಾಣಕ್ಕಾಗಿ ಗೋಪಿನಾಥ್ ಎಂಬವವರು ಮಧ್ಯವರ್ತಿ ರಮೇಶ್ ಎಂಬಾತನ ಮೂಲಕ ಸಿಡಿಎ ಅಧಿಕಾರಿ ಶಿವಕುಮಾರ್ ನನ್ನು ಸಂಪರ್ಕಿಸಿದ್ದರು. ಈ ವೇಳೆ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡಲು ಎಂಟೂವರೆ ಲಕ್ಷ ರೂ. ನೀಡಬೇಕೆಂದು ಅಧಿಕಾರಿ ಶಿವಕುಮಾರ್ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 2 ಲಕ್ಷ ರೂ. ನೀಡುವಂತೆ ತಿಳಿಸಿದ್ದ. ಈ ಬಗ್ಗೆ ಜಮೀನು ಮಾಲಕ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ಲಂಚ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದ್ದು, ಎಸಿಬಿ ಅಧಿಕಾರಿಗಳ ತಂಡ ಸಿಡಿಎ ಕಚೇರಿಯಲ್ಲಿ ಸಂಜೆ 6ರಿಂದ 9ಗಂಟೆ ವರೆಗೆ ತನಿಖೆ ನಡೆಸಿದರು. ಎಸಿಬಿ ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿತ್ತು.







