ಆರ್ಬಿಐ ವಿತ್ತೀಯ ನೀತಿ ಪ್ರಕಟ: ಜಿಡಿಪಿ ಪ್ರಗತಿ ದರ ನಿರೀಕ್ಷೆ ಶೇ.7.8ರಿಂದ ಶೇ.7.2ಕ್ಕೆ ಇಳಿಕೆ, ಬಡ್ಡಿದರ ಯಥಾಸ್ಥಿತಿ

photo pti
ಹೊಸದಿಲ್ಲಿ,ಎ.8: ಆರ್ಬಿಐ ದ್ವೈಮಾಸಿಕ ವಿತ್ತೀಯ ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದು,ಸತತ 11ನೇ ಅವಧಿಗೆ ರೆಪೋ ದರವನ್ನು ಶೇ.4ರಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ ರಿವರ್ಸ್ ರೆಪೋ ದರವನ್ನು ಹಿಂದಿನ ವರ್ಷಗಳ ಶೇ.3.35ರಿಂದ ಶೇ.3.75ಕ್ಕೆ ಹೆಚ್ಚಿಸಲಾಗಿದೆ. ಇದೇ ವೇಳೆ 2022-23ನೇ ವಿತ್ತವರ್ಷಕ್ಕೆ ದೇಶದ ನಿರೀಕ್ಷಿತ ಜಿಡಿಪಿ ಪ್ರಗತಿ ದರವನ್ನು ಆರ್ಬಿಐ ಶೇ.7.2ಕ್ಕೆ ತಗ್ಗಿಸಿದೆ,ಈ ಮೊದಲು ಅದು ಶೇ.7.8 ದರವನ್ನು ಮುನ್ನಂದಾಜಿಸಿತ್ತು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಎಪ್ರಿಲ್-ಜೂನ್) ದಲ್ಲಿ ಶೇ.16.3ರಷ್ಟು ಮತ್ತು ನಂತರದ ತ್ರೈಮಾಸಿಕಗಳಲ್ಲಿ ಅನುಕ್ರಮವಾಗಿ ಶೇ.6.2.ಶೇ.4.1 ಮತ್ತು ಶೇ.4 ಜಿಡಿಪಿ ಪ್ರಗತಿ ದರವನ್ನು ನಿರೀಕ್ಷಿಸಲಾಗಿದೆ ಎಂದು ಆರ್ಬಿಐ ತನ್ನ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯ ಬಳಿಕ ಹೇಳಿದೆ.
ರೆಪೋ ದರವು ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರವಾಗಿದೆ. ರಿವರ್ಸ್ ರೆಪೋ ದರವು ಬ್ಯಾಂಕುಗಳು ತನ್ನ ಬಳಿಯಿರಿಸುವ ಠೇವಣಿಗಳ ಮೇಲೆ ಆರ್ಬಿಐ ನೀಡುವ ಬಡ್ಡಿದರವಾಗಿದೆ.ರಿವರ್ಸ್ ರೆಪೋ ದರದಲ್ಲಿ ಏರಿಕೆಯು ದ್ರವ್ಯತೆಯನ್ನು ಖಚಿತಪಡಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು,ರಶ್ಯ-ಉಕ್ರೇನ್ ಯುದ್ಧದಿಂದಾಗಿ ನಮಗೆ ಹೊಸ ಮತ್ತು ಗಂಭೀರ ಸವಾಲುಗಳು ಎದುರಾಗಿವೆ. ಯುರೋಪ್ನಲ್ಲಿಯ ಸಂಘರ್ಷವು ಜಾಗತಿಕ ಆರ್ಥಿಕತೆಯನ್ನು ದಾರಿ ತಪ್ಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಜಾಗತಿಕ ಕಚ್ಚಾ ತೈಲಗಳ ಬೆಲೆಗಳಲ್ಲಿ ಏರಿಕೆಯನ್ನು ಉಲ್ಲೇಖಿಸಿದ ಅವರು, 2022-23ನೇ ಸಾಲಿಗೆ ಸರಾಸರಿ ಗ್ರಾಹಕ ಬಳಕೆ ಸೂಚಿಯು ಶೇ.4.5ರ ದರದಲ್ಲಿ ಹೆಚ್ಚಲಿದೆ ಎಂದು ಹಿಂದೆ ಅಂದಾಜಿಲಾಗಿತ್ತು,ಆದರೆ ಅದನ್ನೀಗ ಶೆ.5.7ಕ್ಕೆ ಪರಿಷ್ಕರಿಸಲಾಗಿದೆ ಎಂದರು. ಗ್ರಾಹಕ ಬೆಲೆ ಸೂಚಿಯು ಬೆಲೆಗಳಲ್ಲಿ ಏರಿಕೆಯ ಸೂಚಕವಾಗಿದೆ.
ಎಲ್ಲ ಬ್ಯಾಂಕ್ ಮತ್ತು ಎಟಿಎಮ್ಗಳಲ್ಲಿ ಕಾರ್ಡ್ ರಹಿತ ಹಣ ಹಿಂದೆಗೆದುಕೊಳ್ಳುವಿಕೆಯನ್ನು ಲಭ್ಯವಾಗಿಸುವುದಾಗಿ ದಾಸ್ ಈ ಸಂದರ್ಭದಲ್ಲಿ ತಿಳಿಸಿದರು.





