ರಾಜಕೀಯ ಉದ್ದೇಶಗಳಿಗೆ ವಿಜ್ಞಾನ ದುರುಪಯೋಗ: ಪಾರ್ಥ ಮಜುಂದಾರ
ಬೆಂಗಳೂರು: ‘ಕೇಂದ್ರ ಸರಕಾರವು ತನ್ನ ವೈಯಕ್ತಿಕ ರಾಜಕೀಯ ಉದ್ದೇಶಗಳಿಗಾಗಿ ವಿಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ' ಎಂದು ಕೊಲ್ಕತ್ತಾದ ವಿಜ್ಞಾನಿ ಪಾರ್ಥ ಮಜುಂದಾರ ಅವರು ಇಂದಿಲ್ಲಿ ಆರೋಪಿಸಿದ್ದಾರೆ.
ಶುಕ್ರವಾರ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ‘ಭಾರತೀಯ ಜ್ಞಾನಪದ್ಧತಿ’ ಎಂಬ ವೆಬಿನಾರ್‍ನಲ್ಲಿ ಮಾತನಾಡಿದ ಅವರು, ‘ಮೂಲತಃ ಮನುಷ್ಯ ಆಫ್ರಿಕನ್ ಉಪಖಂಡಗಳಲ್ಲಿ ಕಾಣಿಸಿಕೊಂಡಿದ್ದು ನಂತರ ವಿಕಾಸ ಹೊಂದುತ್ತಾ ಗುಂಪುಗುಂಪುಗಳಾಗಿ ಅಲೆದಾಡುತ್ತಾ ವಿಶ್ವದ ಮೂಲೆ ಮೂಲೆ ತಲುಪಿದ. ಅಂತೆಯೇ ಇಂದಿನ ಭಾರತದ ಅಂದಿನ ಪ್ರದೇಶಗಳಲ್ಲೂ ಒಂದು ಪಂಗಡ ಮಧ್ಯ ಪ್ರಾಚ್ಯದ ಮೂಲಕ ವಲಸೆ ಬಂದು ನೆಲೆ ನಿಂತಿತು. ಜಿನ್ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಡಿಎನ್‍ಎ ಮಾಕ್ರ್ಸ್ ಬಳಸಿ ಇದನ್ನು ಪತ್ತೆ ಹಚ್ಚಲಾಗಿದೆ. ಆದರೆ, ಆಳುವ ಸರಕಾರಗಳು ತಮ್ಮ ರಾಜಕೀಯ ಸಿದ್ಧಾಂತಕ್ಕನುಗುಣವಾಗಿ ಒಂದು ಜನಾಂಗೀಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸಲುವಾಗಿ ಐತಿಹಾಸಿಕ ವೈಜ್ಞಾನಿಕ ಸಂಶೋಧನೆಗಳನ್ನೇ ಅಲ್ಲಗಳೆಯುತ್ತಿದ್ದಾರೆ. ಭಾರತದಲ್ಲಿಯೆ ಮನುಷ್ಯಕುಲ ಹುಟ್ಟಿತು. ಇಲ್ಲಿಂದಲೇ ಜನರು ಬೇರೆಡೆ ವಲಸೆ ಹೋಗಿದ್ದಾರೆ ಎನ್ನುವುದು ಮೂರ್ಖತನವಾಗುತ್ತದೆ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನೂ ಅಲ್ಲಗಳೆದಂತಾಗುತ್ತದೆ' ಎಂದು ಹೇಳಿದರು.
‘ನಮ್ಮ ದೇಶವೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಜಗತ್ತಿಗೆ ಅದ್ಭುತವಾದ ಕೊಡುಗೆ ನೀಡಿದೆ. ಅವುಗಳ ಬಗ್ಗೆ ಹೆಮ್ಮೆಪಡೋಣ. ಹೀಗೆ ಕೊಡುಕೊಳ್ಳುವಿಕೆ ಮೂಲಕ ಜ್ಞಾನ ಜಗತ್ತು ವಿಸ್ತಾರಗೊಂಡಿದೆ. ಆದರೆ ಅಧಿಕಾರದಲ್ಲಿರುವ ಜನರು ತಪ್ಪು ವಿಚಾರಗಳನ್ನು ಸಾಂಸ್ಥೀಕರಣಗೊಳಿಸಿ ಹರಿಬಿಡುವುದು ಸಹಜ, ಅದನ್ನು ಶಿಕ್ಷಣದ ಬಗ್ಗೆ ಕಾಳಜಿ ಇರುವವರು ಇದರ ವಿರುದ್ಧ ದ್ವನಿ ಎತ್ತಬೇಕು’ ಎಂದು ಅವರು ಸಲಹೆ ನೀಡಿದರು.
ವಿಶ್ಲೇಷಕ ಕೆ.ಸಿ.ರಘು ಮಾತನಾಡಿ, ‘ಐತಿಹಾಸಿಕ ಮತ್ತು ವೈಜ್ಞಾನಿಕವಾಗಿ ನಿರ್ಜಿವವಾಗಿರುವ ಕೆಲವು ವಿಚಾರಗಳನ್ನು ಇಂದು ಸರಕಾರಗಳು ವೈಜ್ಞಾನಿಕ ಸತ್ಯಗಳೆಂಬಂತೆ ಬಿಂಬಿಸುತ್ತಿರುವುದು ಖೇದನೀಯ. ನಮ್ಮ ದೇಶದಲ್ಲಿ ನಿತ್ಯಾನಂದನಂತಹ ಸ್ವಾಮಿ ಜ್ಞಾನಿಗಳಂತೆ ಮಾತನಾಡುತ್ತಿರುವುದು ದೇಶದ ದುರಂತ. ಸುಳ್ಳು ಹೇಳಿ ಮೋಸ ಮಾಡುವ ಇವರುಗಳು ವಿಜ್ಞಾನದ ಪಾರಿಭಾಷಿಕ ಶಬ್ದಗಳನ್ನು ಬಳಸಿಯೇ ಅಜ್ಞಾನವನ್ನು ಬಿತ್ತುತ್ತಿದ್ದಾರೆ. ಆದುದರಿಂದ ನಾವು ಯಾವಾಗಲೂ ಸತ್ಯದ ಜರಡಿ ಹಿಡಿದೇ ಇಂತಹವರ ಮಾತುಗಳನ್ನು ಕೇಳಬೇಕಿದೆ' ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ ಮಾತನಾಡಿ, ‘ನಮ್ಮ ದೇಶದ ಬಹುತ್ವವನ್ನು ಒಳಗೊಳ್ಳದ ಯಾವುದೇ ನೀತಿಗಳು ಯಶಸ್ವಿಯಾಗುವುದಿಲ್ಲ. ಜನರ ವೈವಿಧ್ಯತೆಯನ್ನು ಒಳಗೊಳ್ಳುವ ನೀತಿಯನ್ನೆ ಸರಕಾರ ರೂಪಿಸಬೇಕು. ಒಂದುವೇಳೆ ಜನತೆಯನ್ನು ಒಳಗೊಳ್ಳದ ನೀತಿಗಳು ಬಂದರೆ ಅದನ್ನು ವಿರೋಧಿಸಬೇಕು' ಎಂದು ತಿಳಿಸಿದರು. ಎಂದರು.
ಹೊಸ ಶಿಕ್ಷಣ ನೀತಿ-2020ರ ಮೂಲಕ ಕೇಂದ್ರದ ಬಿಜೆಪಿ ಸರಕಾರವು ಆರೆಸೆಸ್ಸ್ ವಿಚಾರಗಳನ್ನು ಶಿಕ್ಷಣದಲ್ಲಿ ತುರುಕುವ ಹುನ್ನಾರವನ್ನು ಮಾಡುತ್ತಿದೆ. ಇದರ ವಿರುದ್ದ ಪ್ರಜ್ಞಾವಂತ ಶಿಕ್ಷಣಪ್ರೇಮಿ ಜನತೆ ದೇಶವ್ಯಾಪಿ ಪ್ರಬಲ ಹೋರಾಟಕ್ಕೆ ಮುಂದಾಗಬೇಕು.
-ಎಚ್.ಟಿ.ಭರತಕುಮಾರ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷ







