ಬೆಂಗಳೂರು: ಅಪ್ರಾಪ್ತ ಮಗಳ ಅತ್ಯಾಚಾರ ಪ್ರಕರಣ; ಆರೋಪಿ ತಂದೆಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು, ಎ.8: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ತಂದೆಗೆ ನಗರದ 2ನೆ ತ್ವರಿತ ಕೋರ್ಟ್ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.
ಬಿಹಾರ ಮೂಲದ ಸರ್ವೇಶ್ ರವಿದಾಸ್(44) ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿ. ಸರ್ವೇಶ್ ರವಿದಾಸ್ ತನ್ನ ಪತ್ನಿ ಹಾಗೂ 12 ವರ್ಷದ ಮಗಳೊಂದಿಗೆ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. 2015ರಲ್ಲಿ ಪತ್ನಿ ಸಂಬಂಧಿಕರನ್ನು ಕಾಣಲು ಊರಿಗೆ ತೆರಳಿದ್ದ ವೇಳೆ ಪಾಪಿ ತನ್ನ ಅಪ್ರಾಪ್ತ ಮಗಳನ್ನು ಮನೆಯಲ್ಲಿ ಕೂಡಿಟ್ಟು ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನಂತರ ಸಹಾಯವಾಣಿ ಅಧಿಕಾರಿಗಳು ಬಾಲಕಿ ರಕ್ಷಿಸಿದ್ದರು.
ಬಳಿಕ ಮಕ್ಕಳ ಸಹಾಯವಾಣಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಎಚ್‍ಎಎಲ್ ಠಾಣೆ ಪೊಲೀಸರು ಆರೋಪಿ ಸರ್ವೇಶ್‍ನನ್ನು ಬಂಧಿಸಿ, ಐಪಿಸಿ 376 ಹಾಗೂ ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದರು. ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷರೋಪಣೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನಗರದ 2ನೆ ತ್ವರಿತ ಕೋರ್ಟ್ ಈ ತೀರ್ಪು ನೀಡಿದೆ. ಹಾಗೆಯೇ, ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ 4 ಲಕ್ಷ ರೂ. ವಿತರಿಸುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ. ಸರಕಾರಿ ಅಭಿಯೋಜಕ ಕೆ.ವಿ. ಅಶ್ವತ್ಥನಾರಾಯಣಗೌಡ ವಾದ ಮಂಡಿಸಿದ್ದರು.





