ಕ್ಷುಲ್ಲಕ ಕಾರಣಕ್ಕೆ ಬಾರ್ ನಲ್ಲಿ ಜಗಳ: ಯುವಕನಿಗೆ ಬಾಟಲಿಯಿಂದ ಇರಿದು ಕೊಲೆ

ಬೆಂಗಳೂರು: ಬಾರ್ ನಲ್ಲಿ ಮದ್ಯ ಸೇವಿಸುವಾಗ ತನ್ನ ಗ್ಲಾಸ್‍ನಲ್ಲಿದ್ದ ಮದ್ಯ ಕುಡಿದ ಸ್ನೇಹಿತನ ಜೊತೆ ಜಗಳವಾಡಿ ಅದೇ ಕೋಪದಿಂದ ಹೊರಗೆ ಬಂದು ಬಾಟಲಿಯಿಂದ ಆತನಿಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.
ಮೃತನನ್ನು ಕಾವೇರಿನಗರದ ನಿವಾಸಿ ಸಂತೋಷ್(23) ಎಂದು ಗುರುತಿಸಲಾಗಿದೆ. ಸಂತೋಷ್ ಚಾಲಕ ವೃತ್ತಿ ಮಾಡುತ್ತಿದ್ದನು. ಗುರುವಾರ ರಾತ್ರಿ ಶಶಿ ಮತ್ತು ಶ್ರೀಧರ್ ಜೊತೆ ಬಾರ್‍ಗೆ ಹೋಗಿ ಮೂವರು ಮದ್ಯ ಸೇವಿಸುತ್ತಿದ್ದರು. ಆ ಸಂದರ್ಭದಲ್ಲಿ ಶಶಿಯ ಲೋಟ ತೆಗೆದುಕೊಂಡು ಸಂತೋಷ್ ಕುಡಿದಿದ್ದಾನೆ. ಈ ವಿಚಾರವಾಗಿ ಬಾರ್‍ನಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ನಂತರ ರಾತ್ರಿ 7.30ರ ಸುಮಾರಿಗೆ ಬಾರ್‍ನಿಂದ ಹೊರಗೆ ಬಂದು ಮೂವರು ಮನೆಗೆ ಹೋಗುತ್ತಿದ್ದರು.
ಮತ್ತೆ ಅದೇ ವಿಚಾರವಾಗಿ ಸಂತೋಷ್ ಜೊತೆ ದಾರಿ ಮಧ್ಯೆ ಜಗಳವಾಡಿದ್ದಾನೆ. ಆ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಸಂತೋಷ್ ಶಶಿ ಮೇಲೆ ಹಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಶಶಿ ತನ್ನ ಕೈಯಲ್ಲಿದ್ದ ಬಾಟಲಿಯನ್ನು ನೆಲಕ್ಕೆ ಹೊಡೆದು ನಂತರ ಅದೇ ಬಾಟಲಿಯಿಂದ ಸಂತೋಷ್ ನ ಕುತ್ತಿಗೆ, ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಸಂತೋಷ್‍ನನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮಹದೇವಪುರ ಠಾಣೆ ಪೊಲೀಸರು ಶಶಿ ಮತ್ತು ಆತನ ಸ್ನೇಹಿತ ಶ್ರೀಧರ್‍ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





