ಕೋಡಿಹೊಸಹಳ್ಳಿ ರಾಮಣ್ಣ ಬೇಷರತ್ ಕ್ಷಮೆ ಹಿನ್ನೆಲೆ: ಖಂಡನಾ ನಿರ್ಣಯ ಹಿಂಪಡೆದುಕೊಂಡ ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು: ‘ಸಂಘ ಪರಿವಾರದ ತರಬೇತಿ ಹೊಂದಿದ ಮನುವಾದಿ’ ಎಂದು ಉದ್ವೇಗದ ಭರದಲ್ಲಿ ತಾನು ಅಧ್ಯಕ್ಷರನ್ನು ನಿಂದನೆ ಮಾಡಿದ್ದೆ, ನನ್ನಿಂದಾದ ಈ ಪ್ರಮಾದವನ್ನು ಮನ್ನಿಸಿ, ಪರಿಷತ್ತಿನ ಖಂಡನಾ ನಿರ್ಣಯವನ್ನು ವಾಪಾಸು ಪಡೆದು, ನನಗಾಗಿರುವ ಮಾನಸಿಕ ವೇದನೆಯನ್ನು ಹೋಗಲಾಡಿಸಬೇಕೆಂದು ವಿಷಾದ ವ್ಯಕ್ತಪಡಿಸಿದ ಕೋಡಿಹೊಸಳ್ಳಿ ರಾಮಣ್ಣನವರ ಮನವಿಗೆ ಕನ್ನಡ ಸಾಹಿತ್ಯ ಪರಿಷತ್ ಖಂಡನಾ ನಿರ್ಣಯವನ್ನು ಹಿಂಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ತಿದ್ದುಪಡಿಯ ವಿಚಾರದ ಹಿನ್ನೆಲೆಯಲ್ಲಿ ಕೋಡಿಹೊಸಹಳ್ಳಿ ರಾಮಣ್ಣ ಸಾಮಾಜಿಕ ಜಾಲತಾಣದಲ್ಲಿ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರನ್ನು ‘ಸಂಘ ಪರಿವಾರದ ತರಬೇತಿ ಹೊಂದಿದ ಮನುವಾದಿ’ ಎಂದು ನಿಂದನೆ ಮಾಡಿದ್ದರು. ಈ ವಿಷಯ ಕುರಿತು ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ರಾಮಣ್ಣನವರ ವಿರುದ್ಧ ಖಂಡನಾ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಂಡಿತ್ತು.
ನಂತರ ಕೋಡಿಹೊಸಹಳ್ಳಿ ರಾಮಣ್ಣ ಖುದ್ದು ಪರಿಷತ್ತಿನ ಕಚೇರಿಗೆ ಬಂದು ಅಧ್ಯಕ್ಷರನ್ನು ಭೇಟಿಯಾಗಿ, ಲಿಖಿತವಾಗಿ ಹಾಗೂ ಮೌಖಿಕವಾಗಿ ಬೇಷರತ್ ಕ್ಷಮಾ ಯಾಚಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರ ಮೇಲಿನ ಖಂಡನಾ ನಿರ್ಣಯವನ್ನು ಕಾರ್ಯಕಾರಿ ಸಮಿತಿಯು ಒಮ್ಮತದಿಂದ ಹಿಂಪಡೆದುಕೊಂಡಿದೆ.





