ಬೂಕರ್ ಪ್ರಶಸ್ತಿ ಅಂತಿಮ ಸುತ್ತಿಗೆ ಗೀತಾಂಜಲಿ ಶ್ರೀ ಅವರ ಕಾದಂಬರಿ ಆಯ್ಕೆ

photo courtesy:twitter/@FashionTrnding
ಲಂಡನ್, ಎ.8: ಗೀತಾಂಜಲಿಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಯ ಇಂಗ್ಲಿಷ್ ಅನುವಾದದ ಕೃತಿ ಪ್ರತಿಷ್ಟಿತ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.ಹಿಂದಿಯಲ್ಲಿ ಬರೆದ ಕಾದಂಬರಿಯನ್ನು ಡೈಸಿ ರಾಕ್ವೆಲ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಹಿಂದಿಯಲ್ಲಿ ಬರೆದ ಕೃತಿಯೊಂದು ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದಂತಾಗಿದೆ. ಐರ್ಲ್ಯಾಂಡಿನ ಸಾಹಿತಿ ಫ್ರಾಂಕ್ ವೆಯ್ನಾ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯಲ್ಲಿ ಸಾಹಿತಿ ಮರ್ವ್ ಎಮ್ರೆ, ಸಾಹಿತಿ ಮತ್ತು ನ್ಯಾಯವಾದಿ ಪೆಟಿನಾ ಗ್ರಾಫ್, ಸಾಹಿತಿ ಮತ್ತು ಕಾಮಿಡಿಯನ್ ವಿವ್ ಗ್ರಾಸ್ಕೋಪ್, ಅನುವಾದಕ ಜೆರೆಮಿ ಟಿಯಾಂಗ್ ಸದಸ್ಯರಾಗಿದ್ದಾರೆ. ಒಟ್ಟು 135 ಪುಸ್ತಕಗಳಲ್ಲಿ 6 ಪುಸ್ತಕಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿದೆ.
ಟಾಂಬ್ ಆಫ್ ಸ್ಯಾಂಡ್ ಉತ್ತರ ಭಾರತದ 80 ವರ್ಷದ ಮಹಿಳೆಯ ಕತೆಯಾಗಿದೆ. ಪತಿಯ ನಿಧನದ ಬಳಿಕ ತೀವ್ರ ಖಿನ್ನತೆಗೆ ಜಾರುವ ಮಹಿಳೆ ಹಲವು ವರ್ಷಗಳ ಬಳಿಕ ಚೇತರಿಸಿಕೊಂಡು ಹೊಸ ಬದುಕು ನಡೆಸಲು ನಿರ್ಧರಿಸುತ್ತಾಳೆ. ಪಾಕಿಸ್ತಾನಕ್ಕೆ ತೆರಳುವ ಆಕೆ ಅಲ್ಲಿ, ದೇಶ ವಿಭಜನೆಗೂ ಮುನ್ನ ತಾನು ಕಳೆದಿದ್ದ ಬಾಲ್ಯಕಾಲದ ಸವಿನೆನಪುಗಳನ್ನು ಸ್ಮರಿಸಿಕೊಳ್ಳುತ್ತಾಳೆ ಮತ್ತು ತಾಯಿ, ಪುತ್ರಿ, ಮಹಿಳೆ ಮತ್ತು ಸ್ತ್ರೀವಾದಿಯಾಗುವ ಅರ್ಥವನ್ನು ಮರುಮೌಲ್ಯಮಾಪನ ನಡೆಸುತ್ತಾಳೆ.
ಗೀತಾಂಜಲಿ ಶ್ರೀ ಅವರ ಸೃಜನಶೀಲ, ಸತ್ವಯುತ ಕಾದಂಬರಿಯ ನಿರಂತರ ದೃಷ್ಟಿಕೋನ ಮತ್ತು ಸಮಯದ ಚೌಕಟ್ಟು ನಮ್ಮನ್ನು 80 ವರ್ಷ ಮಹಿಳೆಯ ಜೀವನ ಮತ್ತು ಆಶ್ಚರ್ಯಕರ ಗತಕಾಲದ ಹಂತದತ್ತ ಕೊಂಡೊಯ್ಯುತ್ತದೆ. ಇದನ್ನು ಅಷ್ಟೇ ಸೊಗಸಾಗಿ, ಸ್ಫೂರ್ತಿಯುತವಾಗಿ ರಾಕ್ವೆಲ್ ಇಂಗ್ಷಿಷ್ಗೆ ಅನುವಾದಿಸಿದ್ದಾರೆ ಎಂದು ತೀರ್ಪುಗಾರರು ಹೇಳಿದ್ದಾರೆ.







