ಕರ್ತವ್ಯ ಲೋಪ ಆರೋಪ; ಎಲಿಷ್ ಆಂಡ್ರೂಸ್ ಅಮಾನತ್ತು ಮಾಡಲು ಎಸಿಎಸ್ ಪತ್ರ
ಬೆಂಗಳೂರು, ಎ. 8: ‘ಕಡತ ವಿಲೇವಾರಿಗೆ ವಿಳಂಬ ಧೋರಣೆ ಅನುಸರಿಸಿದ ಹಾಗೂ ಕರ್ತವ್ಯಲೋಪ ಆರೋಪ ಎದುರಿಸುತ್ತಿರುವ ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಎಲಿಷ್ ಆಂಡ್ರೂಸ್ ಅವರನ್ನು ಅಮಾನತು ಮಾಡಬೇಕು' ಎಂದು ಕೋರಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
‘ನಿಗದಿತ ಕಾಲಮಿತಿಯೊಳಗೆ ಕಡತಗಳನ್ನು ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದ್ದರೂ ಎಲಿಷ್ ಆಂಡ್ರೂಸ್ ಅವರು ನಿರ್ಲಕ್ಷಿಸಿದ್ದಾರೆ. 1966ರ ಕರ್ನಾಟಕ ನಾಗರಿಕ ಸೇವೆ(ನಡತೆ) ನಿಯಮ 3(1)ನ್ನು ಉಲ್ಲಂಘಿಸುವ ಮೂಲಕ ಅವರು ಕರ್ತವ್ಯಲೋಪ ಎಸಗಿದ್ದಾರೆ. ಈ ಆರೋಪಗಳನ್ನು ಇದುವರೆಗೂ ಅವರು ಅಲ್ಲಗಳೆದಿಲ್ಲ. ಹೀಗಾಗಿ ಅವರ ಮೇಲೆ ತಕ್ಷಣದಿಂದಲೇ ಇಲಾಖಾ ವಿಚಾರಣೆ ಆರಂಭಿಸಬೇಕು' ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
‘ಇಲಾಖಾ ವಿಚಾರಣೆಗೆ ಅವರು ಅಡ್ಡಿಪಡಿಸುವ ಮತ್ತು ಸಾಕ್ಷ್ಯದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರನ್ನು ತಕ್ಷಣದಿಂದ ಅಮಾನತುಗೊಳಿಸಬೇಕು. ಎಂಜಿನಿಯರ್‍ಗಳ ಬಡ್ತಿಗೆ 4.5 ಕೋಟಿ ರೂ. ಲಂಚ: ಸಿಎಂಗೆ ದೂರು ವಿಚಾರಕ್ಕೆ ಸಂಬಂಧಿಸಿದಂತೆ ವರದಿಯೊಂದನ್ನು ಉಲ್ಲೇಖಿಸಿರುವ ರಾಕೇಶ್ ಸಿಂಗ್ ಅವರು, ಎಲಿಷ್ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರೇಣುಕಾಚಾರ್ಯ ಪತ್ರ: ಈ ಮಧ್ಯೆ ‘ನಗರಾಭಿವೃದ್ಧಿ ಉಪಕಾರ್ಯದರ್ಶಿ ಕೆಎಎಸ್ ಅಧಿಕಾರಿ ಎಲಿಷ್ ಆಂಡ್ರೂಸ್ ಅವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದುವರಿಸಬೇಕು' ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಿಎಂಗೆ ಪತ್ರ ಬರೆದಿದ್ದಾರೆ.







