ರಾಜ್ಯದ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ
"ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಬಹಳಷ್ಟು ಹತಾಶವಾಗಿವೆ"

ಬಸವರಾಜ ಬೊಮ್ಮಾಯಿ
ಬೆಂಗಳೂರು: ‘ಕರ್ನಾಟಕದ ಪ್ರಗತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಏನೇ ಅಭಿಯಾನ ಮಾಡಿದರೂ ರಾಜ್ಯದ ಪ್ರಗತಿ ನಿರಂತರವಾಗಿ ಮುಂದುವರೆಯುತ್ತದೆ. ಮುಂದುವರೆಯುವ ರೀತಿಯಲ್ಲಿ ಖಂಡಿತವಾಗಿಯೂ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಯ ನೀಡಿದ್ದಾರೆ.
ಶುಕ್ರವಾರ ವಿವಿಧ ರಾಜ್ಯಗಳ ಸಚಿವರು ಬೆಂಗಳೂರಿನ ಮೂಲಭೂತ ಸೌಕರ್ಯಗಳ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಬಹಳಷ್ಟು ಹತಾಶವಾಗಿವೆ. ಕರ್ನಾಟಕ ಮತ್ತು ಬೆಂಗಳೂರನ್ನು ಯಾವುದೇ ರಾಜ್ಯದೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಈಗ ಅಭಿವೃದ್ಧಿಯ ದಿಸೆಯಲ್ಲಿ ಆ ರಾಜ್ಯಗಳು ಪ್ರಯತ್ನ ಮಾಡುತ್ತಿದ್ದಾರೆ. ಅದು ಉತ್ತಮ ಅಭಿರುಚಿಯನ್ನು ಹೊಂದಿಲ್ಲ' ಎಂದು ತಿಳಿಸಿದರು.
‘ನನ್ನ ರಾಜ್ಯದ ಬಗ್ಗೆ ಉತ್ತಮವಾಗಿರುವುದನ್ನು ಹೇಳಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಬೇಕು. ಇನ್ನೊಂದು ರಾಜ್ಯವನ್ನು ತೆಗಳಿ ಆಹ್ವಾನ ನೀಡುವ ಅವಶ್ಯಕತೆ ಇಲ್ಲ. ತಮಿಳುನಾಡು ಹಾಗೂ ತೆಲಂಗಾಣದಲ್ಲಿದ್ದವರನ್ನು ನಾವು ಇಲ್ಲಿ ಬನ್ನಿ ಎಂದು ಹೇಳಿಲ್ಲ. ಅದೇ ನಮ್ಮ ಶಕ್ತಿ. ಅವರು ಪಕ್ಕದ ರಾಜ್ಯದಲ್ಲಿರುವವರನ್ನು ಬನ್ನಿ ಎಂದು ಕರೆದರೆ, ಅಲ್ಲಿಗೆ ಹೂಡಿಕೆ ಮಾಡಲು ಯಾರೂ ಬರುತ್ತಿಲ್ಲ ಎಂದರ್ಥ ಅದು ಅವರ ಅಶಕ್ತತೆ' ಎಂದು ಬಸವರಾಜ ಬೊಮ್ಮಾಯಿ ದೂರಿದರು.
‘ಅಂತರ್ರಾಷ್ಟ್ರೀಯ ಜನರು ಇಲ್ಲಿಗೆ ಬಂಡವಾಳ ಹೂಡಿಕೆ ಮಾಡಲು ಬರುತ್ತಿದ್ದಾರೆ. ಕರ್ನಾಟಕಕ್ಕೆ ನಿರಂತರವಾಗಿ ಹೂಡಿಕೆಗಳು ಬರುತ್ತಿವೆ. ಮೂರು ತ್ರೈಮಾಸಿಕದಲ್ಲಿ ಅತಿಹೆಚ್ಚು ವಿದೇಶಿ ನೇರ ಬಂಡವಾಳ ಬಂದಿರುವುದು ಕರ್ನಾಟಕಕ್ಕೆ. ಸ್ಟಾರ್ಟ್ ಅಪ್ನಲ್ಲಿ 2.24 ಬಿಲಿಯನ್ ಡಾಲರ್ಸ್ ಮೊತ್ತದ ವ್ಯವಹಾರವಾಗುತ್ತಿದೆ. ನಮ್ಮ ಶಕ್ತಿಯ ಮೇಲೆ, ಮಾನವ ಸಂಪನ್ಮೂಲದ ಆಧಾರದ ಮೇಲೆ ಜನ ಬರುತ್ತಿದ್ದಾರೆ' ಎಂದು ಅವರು ತಿಳಿಸಿದರು.
ದೊಡ್ಡ ಪ್ರಮಾಣದಲ್ಲಿ ರಸ್ತೆಗಳ ಸುಧಾರಣೆ: ‘ಮೋಹನ್ ದಾಸ ಪೈ ಅವರು ಬೆಂಗಳೂರಿನ ರಸ್ತೆಗಳು ಸರಿ ಇಲ್ಲ ಎಂದು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ರಸ್ತೆಗಳು ಸರಿಯಾಗುತ್ತಿವೆ. ಮಳೆಗಾಲದಲ್ಲಿ ಸ್ವಲ್ಪ ತೊಂದರೆ ಇತ್ತು. ಈಗ ರಸ್ತೆಗಳು ಬಹಳಷ್ಟು ಸುಧಾರಿಸಿದೆ. ಮುಂದೆ ಇನ್ನಷ್ಟು ಸುಧಾರಣೆಯಾಗಲಿದೆ. ಪೈ ಅವರೊಂದಿಗೆ ವೈಯಕ್ತಿಕವಾಗಿ ನಾನು ಮಾತನಾಡುತ್ತೇನೆ. ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ಹಣ ಬಿಡುಗಡೆಯಾಗಿದೆ. ಬಿಬಿಎಂಪಿ ಬಜೆಟ್ ಆಗಿದೆ. ಬರುವ ದಿನಗಳಲ್ಲಿ ರಸ್ತೆಗಳ ಸುಧಾರಣೆಯಾಗುತ್ತದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.







