ಬಿಜೆಪಿ, ಕಾಂಗ್ರೆಸ್ ಕಿತ್ತೊಗೆಯಲು ಕನ್ನಡಿಗರು ನನಗೆ ಸುಪಾರಿ ಕೊಟ್ಟಿದ್ದಾರೆ: ಕುಮಾರಸ್ವಾಮಿ

ಬೆಂಗಳೂರು, ಎ. 8: ‘ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಬಿಜೆಪಿ ನಾಯಕರು ಎಷ್ಟು ಕಾರಣವೋ, ಕಾಂಗ್ರೆಸ್ ನಾಯಕರು ಅಷ್ಟೇ ಕಾರಣ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಂದಿಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತನಾಡಿದ ಅವರು, ‘ವಾಮಮಾರ್ಗದ ಮೂಲಕ ನನ್ನ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ತೆಗೆದರು. ಅದೇ ರೀತಿಯ ಅಪಮಾರ್ಗದ ಮೂಲಕ ಬಿಜೆಪಿ ಸರಕಾರ ಬಂತು. ಆದರೆ, ಇವತ್ತು ಬಿಜೆಪಿ ಸರಕಾರವನ್ನು ಕಾಂಗ್ರೆಸ್ ನಾಯಕರು ಅನೈತಿಕ ಸರಕಾರ ಎಂದು ಹೇಳುತ್ತಿದ್ದಾರೆ. ಇದನ್ನು ರಾಜ್ಯದ ಜನರು ಗಮನಿಸಬೇಕು' ಎಂದು ಹೇಳಿದರು.
‘ದಾಸರಹಳ್ಳಿಯ ಜನತೆಗೆ ಅಧಿಕಾರಿಗಳು ಕಿರುಕುಳ ಕೊಟ್ಟರೆ ಸರಿ ಇರೋದಿಲ್ಲ. ನಮ್ಮ ಕಾರ್ಯಕರ್ತರು ಕಾನೂನು ಮೀರಿ ಕೆಲಸ ಮಾಡಲ್ಲ' ಎಂದು ಎಚ್ಚರಿಕೆ ನೀಡಿದ ಕುಮಾರಸ್ವಾಮಿ, ‘ಇಂದು ಗುಂಡಿಗಳಿಗೆ ಜನ ಬಲಿಯಾಗುತ್ತಿದ್ದಾರೆ. ರಸ್ತೆ ದಾಟಲು ಹೋಗಿ ಹೆಣ್ಣು ಮಗಳು ಸಾವನ್ನಪ್ಪಿದ್ದಾಳೆ ಅಂದರೆ ಏನು ಅರ್ಥ. ಕಳಪೆ ಕಾಮಗಾರಿಗಳಿಂದ ಹೀಗೆ ಆಗುತ್ತಿದೆ. ಕೋರ್ಟ್ ಛೀಮಾರಿ ಹಾಕುತ್ತಿದೆ. ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಬಗ್ಗೆ ಕನಿಕರ ಇಲ್ಲ' ಎಂದು ಟೀಕಿಸಿದರು.
‘ಬೆಂಗಳೂರಿಗೆ ಸರಿಯಾದ ಸೌಕರ್ಯ ನೀಡಿ ಎಂದು ಉದ್ಯಮಿ ಟಿ.ಎ.ಮೋಹನ್ ದಾಸ್ ಪೈ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಸ್ಥಿತಿಯನ್ನು ಬಿಜೆಪಿ ಎಲ್ಲಿಗೆ ತಂದಿದೆ? ಯಾವುದೇ ಕೆಲಸ ಆಗಬೇಕಾದರೆ ಸರಕಾರಕ್ಕೆ ನ್ಯಾಯಾಲಯವೇ ಆದೇಶ ಕೊಡಬೇಕು ಅಥವಾ ಮೋದಿ ಅವರೇ ಹೇಳಬೇಕಾ? ಎಂದು ರಾಜ್ಯ ಸರಕಾರದ ಕಾರ್ಯವೈಖರಿ ಕುರಿತು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ರಾಷ್ಟ್ರೀಯ ಪಕ್ಷಗಳು ಯಾವ ರೀತಿ ಚುನಾವಣೆ ನಡೆಸುತ್ತಿವೆ ಎನ್ನುವುದು ನನಗೆ ಗೊತ್ತಿದೆ. ಕಾಂಗ್ರೆಸ್, ಬಿಜೆಪಿಗೆ ಕನ್ನಡಿಗರು ರಾಜ್ಯವನ್ನು ಗುತ್ತಿಗೆ ಕೊಟ್ಟಿಲ್ಲ. ಇದನ್ನು ಎರಡೂ ಪಕ್ಷಗಳು ನೆನಪಿಟ್ಟುಕೊಳ್ಳಬೇಕು. ಕಾಂಗ್ರೆಸ್ ವಿರೋಧಿಸಲು ಬಿಜೆಪಿ ನಾಯಕರು ನನಗೆ ಸುಪಾರಿ ಕೊಟ್ಟಿದ್ದಾರೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನಮಗೆ ಸುಪಾರಿ ಕೊಟ್ಟಿರೋದು ಬಿಜೆಪಿಯವರಲ್ಲ, ಕನ್ನಡಿಗರು. ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರ ಹಾಕಲು ಕನ್ನಡಿಗರು ಸುಪಾರಿ ಕೊಟ್ಟಿದ್ದಾರೆ, ನೀರಾವರಿ ಯೋಜನೆಗಳ ಬಗ್ಗೆ ಮಾತನಾಡೋದಕ್ಕೆ ಸುಪಾರಿ ಕೊಟ್ಟಿದ್ದಾರೆ ಎಂದು ಅವರು ಕಿಡಿಕಾರಿದರು.
‘ನಾನು ಒಂದು ವರ್ಗದ ಜನರನ್ನು ಓಲೈಸುತ್ತಿಲ್ಲ. ಎಲ್ಲರ ಪರವಾಗಿ ನಾನು ದನಿ ಎತ್ತಿದ್ದೇನೆ. ನಾನು ಸಿಎಂ ಆಗಲು ಈ ಹೋರಾಟ ಅಲ್ಲ. ನಾಡಿನ ಜನರಿಗಾಗಿ ನನ್ನ ಹೋರಾಟ, ಉತ್ತಮ ಬದುಕು ಕಟ್ಟಿಕೊಡೋದಿಕ್ಕೆ ನನ್ನ ಹೋರಾಟ. ನಮ್ಮ ಮತ ಮಾರಾಟಕಿಲ್ಲ ಅನ್ನುವ ವಾತಾವರಣವನ್ನು ರಾಜ್ಯದಲ್ಲಿ ತರುತ್ತೇವೆ. ಅಂತಹ ವಾತಾವರಣ ಹಳ್ಳಿ ಹಳ್ಳಿಯಲ್ಲಿ ಪ್ರಾರಂಭ ಮಾಡುತ್ತೇವೆ. ಈ ಮೂಲಕ ಬಿಜೆಪಿ ಸರಕಾರ ಕಿತ್ತೊಗೆಯುವ ಕೆಲಸ ಮಾಡುತ್ತೇವೆ' ಎಂದು ಅವರು ಗುಡುಗಿದರು.







