ಐಪಿಎಲ್: ಪಂಜಾಬ್ ವಿರುದ್ಧ ಗುಜರಾತ್ಗೆ ರೋಚಕ ಜಯ
ಲಿವಿಂಗ್ಸ್ಟೋನ್ ಅರ್ಧಶತಕ ವ್ಯರ್ಥ, ಗಿಲ್ 96 ರನ್, ಕೊನೆಯ ಓವರ್ನಲ್ಲಿ ಗೆಲುವು ತಂದುಕೊಟ್ಟ ರಾಹುಲ್ ತೆವಾಟಿಯಾ

PHOTO COURTESY:TWITTER
ಮುಂಬೈ, ಎ.8: ಆರಂಭಿಕ ಬ್ಯಾಟರ್ ಶುಭಮನ್ ಗಿಲ್(96 ರನ್,59 ಎಸೆತ, 11 ಬೌಂಡರಿ, 1ಸಿಕ್ಸರ್) ಭರ್ಜರಿ ಅರ್ಧಶತಕ ಹಾಗೂ ಕೊನೆಯ ಓವರ್ನಲ್ಲಿ ಅಮೋಘ ಪ್ರದರ್ಶನ ನೀಡಿದ ರಾಹುಲ್ ತೆವಾಟಿಯಾ(ಔಟಾಗದೆ 13,3 ಎಸೆತ, 2 ಸಿಕ್ಸರ್) ಸಾಹಸದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ನ 16ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 6 ವಿಕೆಟ್ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದೆ.
ಶುಕ್ರವಾರ ಗೆಲ್ಲಲು 190 ರನ್ ಗುರಿ ಬೆನ್ನಟ್ಟಿದ ಗುಜರಾತ್ಗೆ ಕೊನೆಯ ಓವರ್ನ 2 ಎಸೆತಗಳಲ್ಲಿ 12 ರನ್ ಅಗತ್ಯವಿತ್ತು. ಸ್ಮಿತ್ ಬೌಲಿಂಗ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಸಿಡಿಸಿದ ರಾಹುಲ್ ಗುಜರಾತ್ಗೆ ರೋಚಕ ಗೆಲುವು ತಂದುಕೊಟ್ಟರು.
ಗುಜರಾತ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. 45 ರನ್ ಗಳಿಸಿದ್ದಾಗ ಒಡಿಯನ್ ಸ್ಮಿತ್ರಿಂದ ಜೀವದಾನ ಪಡೆದಿದ್ದ ಗಿಲ್ ಅವರು ಸಾಯಿ ಸುದರ್ಶನ್(35 ರನ್,30 ಎಸೆತ) ಅವರೊಂದಿಗೆ 2ನೇ ವಿಕೆಟ್ಗೆ 101 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಪಂಜಾಬ್ ಪರ ಕಾಗಿಸೊ ರಬಾಡ(2-35)ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ಕಿಂಗ್ಸ್ ತಂಡ ಲಿಯಾಮ್ ಲಿವಿಂಗ್ಸ್ಟೋನ್ ಗಳಿಸಿದ ಅರ್ಧಶತಕದ(64 ರನ್, 27 ಎಸೆತ, 7 ಬೌಂಡರಿ, 4 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 189 ರನ್ ಗಳಿಸಿತು.







