ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ರಶ್ಯ ಅಮಾನತು

PTI
ವಿಶ್ವಸಂಸ್ಥೆ, ಎ.8: ಉಕ್ರೇನ್ನಲ್ಲಿ, ಅದರಲ್ಲೂ ಮುಖ್ಯವಾಗಿ ಬುಚಾ ನಗರದಲ್ಲಿ ರಶ್ಯ ಸೇನೆ ಯುದ್ಧಾಪರಾಧ ಎಸಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಗುರುವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸದಸ್ಯತ್ವದಿಂದ ರಶ್ಯವನ್ನು ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಭಾರತ ಮತ್ತೊಮ್ಮೆ ಮತದಾನದಿಂದ ದೂರ ಉಳಿದಿದೆ ಎಂದು ಮೂಲಗಳು ಹೇಳಿವೆ. ಇದು ರಶ್ಯದ ವಿರುದ್ಧ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಮೈತ್ರಿಕೂಟ ಮತ್ತು ಉಕ್ರೇನ್ಗೆ ದೊರೆತ ಪ್ರಮುಖ ರಾಜತಾಂತ್ರಿಕ ಗೆಲುವಾಗಿದೆ. ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ರಶ್ಯದ ಸದಸ್ಯತ್ವವನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಅಮೆರಿಕ ಮಂಡಿಸಿದ್ದು 93 ದೇಶಗಳು ಪರವಾಗಿ ಮತ ಚಲಾಯಿಸಿದರೆ 24 ದೇಶಗಳು ವಿರೋಧಿಸಿದವು. ಭಾರತ ಸಹಿತ 58 ದೇಶಗಳು ಮತದಾನದಿಂದ ದೂರ ಉಳಿದವು.
ವಾಸ್ತವಿಕತೆ ಮತ್ತು ಕಾರ್ಯವಿಧಾನದ ಕಾರಣಗಳಿಗಾಗಿ ಭಾರತ ಮತದಾನದಿಂದ ದೂರ ಉಳಿದಿದೆ. ಬುಚಾದಲ್ಲಿನ ಹತ್ಯೆ ಪ್ರಕರಣ ಅತ್ಯಂತ ಆತಂಕ ಮತ್ತು ನೋವಿನ ವಿಷಯವಾಗಿದ್ದು ಈ ಹತ್ಯೆಯನ್ನು ಭಾರತ ಸ್ಪಷ್ಟವಾಗಿ ಖಂಡಿಸಿದ್ದು ಸ್ವತಂತ್ರ ತನಿಖೆಗಾಗಿ ಆಗ್ರಹಿಸಿದೆ ಎಂದು ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದರು. ಉಕ್ರೇನ್ನಲ್ಲಿ ಸಂಘರ್ಷ ಆರಂಭವಾದಂದಿನಿಂದ ಭಾರತ ಶಾಂತಿ, ಮಾತುಕತೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಯ ಅಗತ್ಯವನ್ನು ಒತ್ತಿಹೇಳಿದೆ. ಭಾರತವು ಯಾವುದೇ ಪಕ್ಷದ ಪರ ನಿಲ್ಲುವುದಾದರೆ ಅದು ಶಾಂತಿಯ ಪರವಾಗಿರುತ್ತದೆ ಎಂದವರು ಹೇಳಿದರು.ಮತದಾನದ ಬಳಿಕ, ತಾನು ಸಮಿತಿಯಿಂದ ಹೊರ ನಡೆಯುವುದಾಗಿ ರಶ್ಯ ಘೋಷಿಸಿತು. ಉಕ್ರೇನ್ನ ಬುಚಾ ನಗರದಿಂದ ರಶ್ಯ ಪಡೆ ವಾಪಸಾದ ಬಳಿಕ ಅಲ್ಲಿನ ಬೀದಿಯಲ್ಲಿ ಹಲವು ಮೃತದೇಹಗಳು ಅನಾಥವಾಗಿ ಬಿದ್ದುಕೊಂಡಿರುವುದು ಪತ್ತೆಯಾಗಿದ್ದು ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ, ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಶ್ಯವನ್ನು ಮಾನವ ಹಕ್ಕು ಸಮಿತಿಯಿಂದ ಅಮಾನತುಗೊಳಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.
ವಿಶ್ವಸಂಸ್ಥೆಯಲ್ಲಿ ನಿರ್ಣಯದ ಮೇಲಿನ ಮತದಾನಕ್ಕೂ ಮುನ್ನ ಮಾತನಾಡಿದ ವಿಶ್ವಸಂಸ್ಥೆಗೆ ಉಕ್ರೇನ್ನ ರಾಯಭಾರಿ ಸೆರ್ಗಿಯ್ ಕಿಸ್ಟಿಟ್ಸ್ಯಾ, ನಿರ್ಣಯ ಬೆಂಬಲಿಸುವಂತೆ ಸದಸ್ಯ ದೇಶಗಳನ್ನು ಆಗ್ರಹಿಸಿದರು. ಬುಚಾ ಹಾಗೂ ಇತರ ಹಲವು ನಗರಗಳಲ್ಲಿ ರಶ್ಯದ ಸೇನೆ ಸಾವಿರಾರು ಅಮಾಯಕ ಜನರನ್ನು ಚಿತ್ರಹಿಂಸೆ ನೀಡಿ ಕೊಂದಿದೆ . ಇನ್ನು ಕೆಲವರನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಮಾನವ ಹಕ್ಕುಗಳ ಸಮಿತಿಯ ಸದಸ್ಯ ದೇಶವೊಂದು ತನ್ನ ವಾಗ್ದಾನ ಮರೆತು ಎಷ್ಟು ಕೀಳುಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇಂತಹ ಕ್ರೂರ ವರ್ತನೆಗೆ ಸೂಕ್ತ ಪ್ರತಿಕ್ರಿಯೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.







