ಪರಿಶಿಷ್ಟ ಮಹಿಳೆ ಮತ್ತು ರಾಜ್ಯ ಬಜೆಟ್
ಮಾನ್ಯರೇ,
ರಾಜ್ಯದ ಮುಖ್ಯಮಂತ್ರಿ ಇತ್ತೀಚೆಗೆ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಶಿಕ್ಷಣ, ಸರಕಾರಿ ಉದ್ಯೋಗಗಳಲ್ಲಿ ಶೇ. 18 ಮತ್ತು ತಳಹಂತದ ರಾಜಕೀಯ ಕ್ಷೇತ್ರಗಳಲ್ಲಿ, ಆರ್ಥಿಕ ಕ್ಷೇತ್ರಗಳಲ್ಲಿ ಸಬ್ಸಿಡಿಗಳನ್ನು ನೀಡುವ ಯೋಜನೆಗಳಲ್ಲಿ ಜನಸಂಖ್ಯಾವಾರು ಶೇ. 24.1 ಮೀಸಲಾತಿಯನ್ನು ಪರಿಶಿಷ್ಟರಿಗೆ ಸಂವಿಧಾನಬದ್ಧವಾಗಿ ರಾಜ್ಯದಲ್ಲಿಯೂ ಕಲ್ಪಿಸಲಾಗಿದೆ. ಈ ಬಜೆಟ್‌ನಲ್ಲಿ ಕ್ರಮಸಂಖ್ಯೆ 157ರಲ್ಲಿ ಸರಕಾರದ ವಿವಿಧ ನಿಗಮಗಳ ಮೂಲಕ ಸ್ವಉದ್ಯೋಗ ಮತ್ತು ಇತರ ಯೋಜನೆಗಳಲ್ಲಿ ಉಚಿತವಾಗಿ ನೀಡುವ ಸಹಾಯಧನ, ಅನುದಾನ ವಿತರಿಸುವ ಆರ್ಥಿಕ ಕ್ಷೇತ್ರದ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ. 25 ಮೀಸಲಾತಿಯನ್ನು ಮಂಜೂರು ಮಾಡಲಾಗಿದೆ. ಆದರೆ ಕೆ.ಐ.ಎ.ಡಿ.ಬಿ. ಮತ್ತಿತರ ಮಂಡಳಿಗಳಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಅಡಿಯಲ್ಲಿ ಸರಕಾರದ ಬಹುತೇಕ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುತ್ತಿರುವ ವಿವಿಧ ಸಬ್ಸಿಡಿ ಯೋಜನೆಗಳಲ್ಲಿ, ಲೋಕೋಪಯೋಗಿ ಮತ್ತಿತರ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ನಿರ್ಮಾಣ ಕಾಮಗಾರಿ ಗುತ್ತಿಗೆ ಯೋಜನೆಗಳಲ್ಲಿ, ಸರಕಾರಿ ಕ್ಷೇತ್ರ ಅಥವಾ ಸರಕಾರಿ ಸ್ವಾಮ್ಯದಲ್ಲಿ ಸರಕುಗಳು ಮತ್ತು ಸೇವೆ ಪೂರೈಕೆ ಯೋಜನೆಗಳಲ್ಲಿ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ. 25 ಮೀಸಲಾತಿಯನ್ನು ಕಲ್ಪಿಸಿ ಪರಿಷ್ಕೃತ ಸರಕಾರಿ ಆದೇಶವನ್ನು ಹೊರಡಿಸುವ ಅನಿವಾರ್ಯತೆ ಇದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟರ ವಿದ್ಯಾರ್ಥಿವೇತನ ಮತ್ತಿತರ ವಿವಿಧ ಇಲಾಖೆಗಳಲ್ಲಿರುವ ಹಣಕಾಸು ನೆರವಿನ ಯೋಜನೆಗಳನ್ನು ವಾರ್ಷಿಕ ವರಮಾನ 2.5 ಲಕ್ಷಕ್ಕಿಂತ ಕಡಿಮೆ ಇರುವ ಪರಿಶಿಷ್ಟ ಕುಟುಂಬಗಳಿಗೆ ಮಾತ್ರ ನೀಡಲಾಗುತ್ತದೆ. ಈ ನಿಯಮವು ಸರಕಾರಿ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಭಾರತದ ಎಲ್ಲ ಪ್ರಜೆಗಳಿಗೆ ಆರ್ಥಿಕ ನ್ಯಾಯವನ್ನು ನೀಡುವ ಸಂವಿಧಾನದ ಪ್ರಸ್ತಾವನೆಯಲ್ಲಿ ಕಂಡುಬರುವ ಭರವಸೆಯು ಪರಿಶಿಷ್ಟ ಮಹಿಳೆಯರಿಗೂ ಕೂಡ ದಕ್ಕ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಸಬ್ಸಿಡಿ ಯೋಜನೆಗಳಲ್ಲಿ ಮೊದಲನೆಯ ಆದ್ಯತೆಯನ್ನು ಅಥವಾ ಮೀಸಲಾತಿಯನ್ನು ಪರಿಶಿಷ್ಟರ ಪೈಕಿ ಕಡುಬಡವರಿಗೆ ನೀಡಿ, ಒಂದು ವೇಳೆ ಪರಿಶಿಷ್ಟ ಮಹಿಳೆಯರಲ್ಲಿ ಸೂಕ್ತ ಅಭ್ಯರ್ಥಿಗಳು ಸಿಗದಿದ್ದಲ್ಲಿ ಅದನ್ನು ಪರಿಶಿಷ್ಟ ಪುರುಷರಿಗೆ ವರ್ಗಾಯಿಸುವ ಪರಿಷ್ಕೃತ ಸರಕಾರಿ ಆದೇಶವನ್ನು ಹೊರಡಿಸುವ ಕಾಲ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಎಪ್ಪತ್ತೈದು ವರ್ಷಗಳ ಆಚರಣೆಯ ಈ ಸಂದರ್ಭದಲ್ಲಿ ಸರಕಾರದ ಮಹಿಳಾ ಸಬಲೀಕರಣ ಆಶಯಗಳು ಮತ್ತು ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಜಾರಿಗಾಗಿ ಇಂತಹ ಜನಪರ ನಿರ್ಧಾರವನ್ನು ಸರಕಾರವು ಕೈಗೊಳ್ಳಬೇಕಾಗಿದೆ. ಇದರಿಂದಾಗಿ ರಾಜ್ಯದ ಖಜಾನೆಗೆ ಹೆಚ್ಚುವರಿ ಹೊರೆಯೂ ಆಗುವುದಿಲ್ಲ ಎಂಬುದನ್ನು ಗಮನಿಸಬೇಕು.





