26/11 ದಾಳಿಯ ಸೂತ್ರಧಾರ ಹಫೀಝ್ ಸಯೀದ್ ಗೆ 31 ವರ್ಷ ಜೈಲುಶಿಕ್ಷೆ

PTI
ಇಸ್ಲಮಾಬಾದ್, ಎ.8: ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್ಗೆ ಪಾಕಿಸ್ತಾನದ ನ್ಯಾಯಾಲಯ 31 ವರ್ಷದ ಜೈಲುಶಿಕ್ಷೆ ವಿಧಿಸಿದೆ. ಲಷ್ಕರೆ ತೈಯಬ್ಬ ಉಗ್ರಸಂಘಟನೆಯ ಸ್ಥಾಪಕ ಮತ್ತು ಜಮಾತ್ ಉದ್ದವಾ ಮುಖ್ಯಸ್ಥ ಸಯೀದ್ಗೆ 2 ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಅಲ್ಲದೆ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು 3,40,000 ರೂ. ದಂಡ ವಿಧಿಸುವಂತೆ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ಆದೇಶಿಸಿದೆ. ಸಯೀದ್ ನಿರ್ಮಿಸಿರುವ ಮಸೀದಿ ಮತ್ತು ಮದರಸವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ. 70 ವರ್ಷದ ಸಯೀದ್ ವಿರುದ್ಧದ ಮತ್ತೊಂದು ಪ್ರಕರಣದಲ್ಲಿ 2020ರಲ್ಲಿ 15 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಸಯೀದ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರೂ ಆತ ಮುಕ್ತವಾಗಿ ಓಡಾಡಿಕೊಂಡು, ಹಲವು ರ್ಯಾಲಿಗಳಲ್ಲಿ ಭಾಷಣ ಮಾಡುತ್ತಿದ್ದ . 2019ರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಕ್ಕೆ ಭೇಟಿ ನೀಡುವ ಕೆಲ ದಿನಗಳ ಮೊದಲು ಸಯೀದ್ನನ್ನು ಬಂಧಿಸಲಾಗಿತ್ತು. 2001ರ ಬಳಿಕ ಸಯೀದ್ನನ್ನು 8 ಬಾರಿ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ಸಂಸದೀಯ ಸಮಿತಿ ವರದಿ ಮಾಡಿತ್ತು.





