ಬ್ರಿಟನ್: ತೆರಿಗೆ ವಿವಾದ; ಪತ್ನಿಯನ್ನು ಸಮರ್ಥಿಸಿಕೊಂಡ ಸಚಿವ ರಿಷಿ ಸುನಾಕ್

PHOTO:TWIITER/@SkyNews
ಲಂಡನ್, ಎ.8: ಭಾರತ ಮೂಲದ ಪತ್ನಿ ಅಕ್ಷತಾ ಮೂರ್ತಿಯ ತೆರಿಗೆ ಸ್ಥಾನಮಾನದ ವಿಷಯದಲ್ಲಿ ವಿಪಕ್ಷಗಳು ನಡೆಸಿರುವ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್ ಸಚಿವ ರಿಷಿ ಸುನಾಕ್, ಆಕೆ ಭಾರತದವಳು, ತನ್ನ ದೇಶವನ್ನು ಪ್ರೀತಿಸುತ್ತಾಳೆ ಮತ್ತು ಹೆತ್ತವರ ಆರೈಕೆಗಾಗಿ ತನ್ನ ದೇಶಕ್ಕೇ ಹಿಂದಿರುಗಲಿದ್ದಾಳೆ ಎಂದು ಹೇಳುವ ಮೂಲಕ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿಯ ಪುತ್ರಿ, ಬ್ರಿಟನ್ ನ ಸಚಿವ ರಿಷಿ ಸುನಾಕ್ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಬ್ರಿಟನ್ನಲ್ಲಿ ನಿವಾಸೇತರ ತೆರಿಗೆ ಸ್ಥಾನಮಾನ ಹೊಂದಿದ್ದಾರೆ. ಅವರು ಬ್ರಿಟನ್ ನ ಪೌರತ್ವ ಪಡೆದಿಲ್ಲ. ಇದರಿಂದ ಅವರು ತೆರಿಗೆ ವಿನಾಯಿತಿಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಭಾರತ ಮೂಲದ ಮಹಿಳೆಯೊಬ್ಬರು ಲಂಡನ್ನ ಡೌನಿಂಗ್ ಸ್ಟ್ರೀಟ್(ಬ್ರಿಟನ್ನ ಪ್ರಧಾನಿ ಹಾಗೂ ವಿತ್ತ ಸಚಿವರ ಸರಕಾರಿ ನಿವಾಸ)ನಲ್ಲಿ ವಾಸಿಸುತ್ತಿರುವುದರಲ್ಲಿ ವಿವಾದಕ್ಕೆ ಕಾರಣವಾಗುವ ಅಂಶಗಳಿಲ್ಲ ಎಂದು ನನಗನಿಸುತ್ತದೆ. ಆಕೆ ಭಾರತೀಯಳು ಮತ್ತು ಆ ದೇಶಕ್ಕೇ ಹಿಂದಿರುಗುವುದಾಗಿ ಇಲ್ಲಿಗೆ ಬರುವ ಮುನ್ನವೇ ನನ್ನಲ್ಲಿ ತಿಳಿಸಿದ್ದಳು. ನನ್ನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ತನ್ನ ದೇಶದೊಂದಿಗೆ ಸಂಬಂಧ ಕಡಿದುಕೊಳ್ಳಬೇಕೆಂದು ಆಗ್ರಹಿಸುವುದು ನ್ಯಾಯವಲ್ಲ. ನಾನು ಹೇಗೆ ನನ್ನ ದೇಶ(ಬ್ರಿಟನ್)ವನ್ನು ಪ್ರೀತಿಸುತ್ತೇನೋ ಆಕೆಯೂ ಇದೇ ರೀತಿ ತನ್ನ ದೇಶವನ್ನು ಪ್ರೀತಿಸುತ್ತಾಳೆ. ಆಕೆ ಮತ್ತೊಂದು ದೇಶದಿಂದ ಬಂದಿರುವುದು ಈ ಗೊಂದಲಕ್ಕೆ ಕಾರಣ’ ಎಂದು ರಿಷಿ ಸುನಾಕ್ ಹೇಳಿದ್ದಾರೆ.





