ಆಮದು ಸರ್ಕಾರ ಒಪ್ಪಿಕೊಳ್ಳಲಾಗದು: ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನ ಸುಪ್ರೀಂಕೋರ್ಟ್ ಶುಕ್ರವಾರ ತಮ್ಮ ಸರ್ಕಾರದ ವಿರುದ್ಧ ನೀಡಿದ ತೀರ್ಪಿನ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಲಯದ ಬಗ್ಗೆ ನನಗೆ ತೀವ್ರ ಗೌರವ ಇದೆ ಎಂದು ಹೇಳಿ ತೀರ್ಪನ್ನು ಒಪ್ಪಿಕೊಂಡಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ಮತ್ತೆ ಭಾರತವನ್ನು ಶ್ಲಾಘಿಸಿದ್ದು, ಭಾರತದ ರಾಜಕೀಯ ಪರಿಸ್ಥಿತಿಯನ್ನು ಯಾವ ಸೂಪರ್ ಪವರ್ ಕೂಡಾ ಕದಕಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ಬಳಸಿದ ಟಿಶ್ಯೂಪೇಪರ್ ನಂತಾಗಿದೆ ಎಂದು ಹೇಳಿದರು.
ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ವಜಾಗೊಳಿಸಿದ ಉಪ ಸ್ಪೀಕರ್ ಕಾಸಿಮ್ ಸೂರಿ ಅವರ ನಿರ್ಧಾರವನ್ನು ಮತ್ತು ಕೆಳಮನೆಯನ್ನು ವಿಸರ್ಜಿಸಿದ ಅಧ್ಯಕ್ಷ ಆರೀಫ್ ಆಲ್ವಿ ಅವರ ಕ್ರಮವನ್ನು ಸುಪ್ರೀಂಕೋರ್ಟ್ ಗುರುವಾರ ತಳ್ಳಿಹಾಕಿತ್ತು.
"ನಾನು ಎಂದಿಗೂ ಆಮದು ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಎಚ್ಚರಿಸಿದ ಅವರು, ಈ ಬಗ್ಗೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದರು. ಅವಿಶ್ವಾಸ ನಿರ್ಣಯ ಬಗ್ಗೆ ಶನಿವಾರ ಮತದಾನ ನಡೆಯಲಿದೆ.
ಉಕ್ರೇನ್ ಮೇಲಿನ ರಷ್ಯಾ ದಾಳಿ ಸಂದರ್ಭದಲ್ಲಿ ಕಳೆದ ಫೆಬ್ರವರಿಯಲ್ಲಿ ತಾನು ರಷ್ಯಾಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ನನ್ನ ಸರ್ಕಾರವನ್ನು ಕಿತ್ತೊಗೆಯಲು ಅಮೆರಿಕ ಸಂಚು ರೂಪಿಸಿದೆ ಎಂದು ಆಪಾದಿಸಿದರು. ಅವಿಶ್ವಾಸ ಗೊತ್ತುವಳಿ ಮಂಡಿಸುವ ಮುನ್ನವೂ, ಅಮೆರಿಕದ ಅಧಿಕಾರಿಗಳು ಪಾಕಿಸ್ತಾನದ ರಾಯಭಾರಿಗೆ ಎಚ್ಚರಿಕೆ ಸಂದೇಶ ನೀಡಿದ್ದರು. ಇಮ್ರಾನ್ ಖಾನ್ ಸಂಸತ್ತಿನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾದರೆ ಪಾಕಿಸ್ತಾನ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು ಎಂದು ಬಹಿರಂಗಪಡಿಸಿದರು.
ತಮ್ಮನ್ನು ಪದಚ್ಯುತಗೊಳಿಸುವಲ್ಲಿ ಯಶಸ್ವಿಯಾದರೆ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದೂ ಅಮೆರಿಕಕ್ಕೆ ಗೊತ್ತಿದೆ ಎಂದು ಹೇಳಿದರು.







