ಹಿಮಾಚಲ ಪ್ರದೇಶದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅನುಪ್ ಕೇಸರಿ ಬಿಜೆಪಿಗೆ ಸೇರ್ಪಡೆ

photo:ANI
ಹೊಸದಿಲ್ಲಿ: ಹಿಮಾಚಲ ಪ್ರದೇಶದ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅನುಪ್ ಕೇಸರಿ ಅವರು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಇತರ ಇಬ್ಬರು ಪಕ್ಷದ ಕಾರ್ಯಕರ್ತರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.
ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೇಸರಿ ಅವರು "ಕೆಲವು ದಿನಗಳ ಹಿಂದೆ ಮಂಡಿ ಕ್ಷೇತ್ರದಲ್ಲಿ ರೋಡ್ ಶೋ ವೇಳೆ ಕೇಜ್ರಿವಾಲ್ ನಮ್ಮ ಬಗ್ಗೆ ನಿರ್ಲಕ್ಷ್ಯದಿಂದ ವರ್ತಿಸಿದರು ಎಂದು ಆರೋಪಿಸಿದ್ದಾರೆ.
ಈ ಬೆಳವಣಿಗೆಯಿಂದ ಹಿಮಾಚಲ ಪ್ರದೇಶದಲ್ಲಿ ಎಎಪಿಗೆ ಭಾರಿ ಹಿನ್ನಡೆಯಾಗಿದ್ದು, ಅದರ ರಾಜ್ಯ ಘಟಕದ ಎಎಪಿ ಅಧ್ಯಕ್ಷ ಅನುಪ್ ಕೇಸರಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸತೀಶ್ ಠಾಕೂರ್ ಹಾಗೂ ಉನಾ ಜಿಲ್ಲಾ ಮುಖ್ಯಸ್ಥ ಇಕ್ಬಾಲ್ ಸಿಂಗ್ ಅವರು ರಾಷ್ಟ್ರ ರಾಜಧಾನಿಯ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
"ಹಿಮಾಚಲ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ಎಎಪಿಗಾಗಿ ನಾವು ಅತ್ಯಂತ ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಆದರೆ, ಅರವಿಂದ ಕೇಜ್ರಿವಾಲ್ ಅವರು ಮಂಡಿಯಲ್ಲಿ ರ್ಯಾಲಿ ಹಾಗೂ ರೋಡ್ಶೋಗಾಗಿ ಬಂದಾಗ ಪಕ್ಷದ ರಾಜ್ಯ ಕಾರ್ಯಕರ್ತರನ್ನು ಕಡೆಗಣಿಸಿದರು, ಎಎಪಿ ಕಾರ್ಯಕರ್ತರು ಈ ಕಡೆಗಣನೆಯನ್ನು ಅವಮಾನವೆಂದು ಪರಿಗಣಿಸಿದ್ದಾರೆ ಹಾಗೂ ಸ್ವಾಭಿಮಾನಕ್ಕಾಗಿ ಪಕ್ಷವನ್ನು ತೊರೆದಿದ್ದಾರೆ'' ಎಂದು ಅನುಪ್ ಕೇಸರಿ ಹೇಳಿದ್ದಾರೆ.