ಮುಸ್ಲಿಮರ ಜೊತೆ ವಿವಾಹವಾಗುವ ಕುಟುಂಬವನ್ನು ಬಹಿಷ್ಕರಿಸಿ: ಸರಕಾರಿ ಲೆಟರ್ ಹೆಡ್ ನಲ್ಲಿ ವಿವಾದಾತ್ಮಕ ಪತ್ರ!
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಂದ ಲೆಟರ್ ಹೆಡ್ ದುರ್ಬಳಕೆ ಆರೋಪ

ವೈರಲ್ ಆಗಿರುವ ಪತ್ರ
ಹುಬ್ಬಳ್ಳಿ, ಎ.9: ಮುಸ್ಲಿಮರ ಜೊತೆ ಅಂತರ್ ಧರ್ಮೀಯ ವಿವಾಹವಾಗುವ ಎಸ್.ಎಸ್.ಕೆ. ವ್ಯಕ್ತಿಯ ಕುಟುಂಬವನ್ನು ಬಹಿಷ್ಕರಿಸಲು ಕರೆ ನೀಡಿ ಬಿಜೆಪಿ ಮುಖಂಡ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರಗಿ ಬರೆದಿದ್ದೆನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷರ ಹೆಸರಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಲೆಟರ್ ಹೆಡ್ ನಲ್ಲಿ ಬರೆದಂತಿರುವ ಈ ಪತ್ರದಲ್ಲಿ, ತಮ್ಮ ಸಮಾಜದ ಯಾರೇ ಆದರೂ ಮುಸ್ಲಿಮರ ಜೊತೆ ವಿವಾಹವಾದರೆ ಅಂತಹ ಕುಟುಂಬವನ್ನು ಸಮಾಜದಿಂದ ಹೊರಗಿಡಬೇಕು. ದೇವಸ್ಥಾನ ಪ್ರವೇಶವನ್ನು ನಿಷೇಧಿಸಬೇಕು. ಅದೇರೀತಿ ಅಂತಹ ಕುಟುಂಬಕ್ಕೆ ಸಮಾಜ ಹೆಣ್ಣು ಕೊಡಬಾರದು ಮತ್ತು ಅಂತಹ ಕುಟುಂಬದಿಂದ ಹೆಣ್ಣು ತರಬಾರದು. ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ನಿಷೇಧ ಹೇರಬೇಕು ಎಂದು ಉಲ್ಲೇಖಿಸಲಾಗಿದೆ.
ಕಳೆದ ವಾರ ಎಸ್.ಎಸ್.ಕೆ. ಸಮಾಜದ ಯುವತಿಯೊಬ್ಬಳು ಮುಸ್ಲಿಮ್ ಯುವಕನನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಳು. ಇದಕ್ಕೆ ಕೆಲ ಸಂಘಟನೆಗಳು 'ಲವ್ ಜಿಹಾದ್' ಪಟ್ಟ ಕಟ್ಟಿ ಭಾರೀ ಪ್ರತಿಭಟನೆ ನಡೆಸಿದ್ದರು. ಈ ನಡುವೆ ಯುವತಿಯು ತಾನು ಇಷ್ಟಪಟ್ಟೆ ಮುಸ್ಲಿಮ್ ಯುವಕನನ್ನು ಮದುವೆಯಾಗಿದ್ದೇನೆ. ತನ್ನನ್ನು ಯಾರು ಬಲವಂತಪಡಿಸಿಲ್ಲ ಎಂದು ಹೇಳಿದ್ದರಿಂದ ವಿವಾದ ತಣ್ಣಗಾಗಿತ್ತು. ಇದೇ ಹಿನ್ನೆಲೆಯಲ್ಲಿ ಈ ಬಹಿಷ್ಕಾರದ ಪತ್ರ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಸರಕಾರಿ ಲೆಟರ್ ಹೆಡ್ ಅನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.







