ನಿಟ್ಟೆ ಹೆಲ್ತ್ ಕೇರ್ ಇನೋವೇಷನ್ ಹೆಕತಾನ್ 2022 ಉದ್ಘಾಟನೆ

ಕಾರ್ಕಳ: ಪ್ರಸ್ತುತ ಪರಿಸ್ಥಿತಿ ಬದಲಾವಣೆಯನ್ನು ಹೊತ್ತು ತರುತ್ತಿದೆ. ಎಲ್ಲವೂ ಬದಲಾಗಿದೆ. ಶಿಕ್ಷಣ, ಔದ್ಯೋಗಿಕ ಕ್ಷೇತ್ರ ಬಹಳಷ್ಟು ಬದಲಾಗಿದೆ. ಹೊಸ ಹೊಸ ಆವಿಷ್ಕಾರಗಳ ಮೂಲಕ ವ್ಯಾಪಕ ಬದಲಾವಣೆಗೆ ಹೊಂದಿಕೊಳ್ಳಲು ಸಾಧ್ಯ ಎಂದು ಮಾಹೆಯ ಪ್ರೊ. ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.
ಅವರು ನಿಟ್ಟೆ ಹೆಲ್ತ್ ಕೇರ್ ಇನೋವೇಷನ್ ಹೆಕತಾನ್ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕ್ಷಣಕ್ಷಣದಲ್ಲಿ ಆವಿಷ್ಕಾರ ನಡೆಯುತ್ತಿದೆ. ಸಕಾರಾತ್ಮಕ ಸ್ಪಂದನೆ ಅಗತ್ಯ. ವಿದ್ಯಾರ್ಥಿಗಳು ಸಕ್ರೀಯರಾಗಿ ಆವಿಷ್ಕಾರಯುಕ್ತ ಚಿಂತನೆಗಳನ್ನು ಬೆಳೆಸಬೇಕು. ನಿರಂತಕ ಕಲಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ, ನಿಟ್ಟೆ ವಿ.ವಿ. ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಹೆಕತಾನ್‌ನ ಧ್ಯೇಯ, ಉದ್ದೇಶಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ.ಕುಲಾಧಿಪತಿ ಎನ್.ವಿನಯ ಹೆಗ್ಡೆ ಮಾತನಾಡಿ, ಹೆಕತಾನ್ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಹೇಗೆ ಆವಿಷ್ಕಾರಗೊಳಿಸುತ್ತದೆ ಎಂಬ ವಿಷಯದ ಕುರಿತು ಉದ್ದಿಮೆಶಾಹಿಯ ದೃಷ್ಟಿಕೋನದಿಂದ ವಿವರಿಸಿದರು.
ದೇಶದ ಪ್ರತಿಷ್ಠಿತ ಸಂಸ್ಥೆಗಳ ೫೦ಕ್ಕೂ ಅಧಿಕ ಭಾಷಾಳುಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ನಿಟ್ಟೆ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿರ್ದೇಶಕ ಡಾ.ಕೆ.ಶಂಕರನ್ ಉಪಸ್ಥಿತರಿದ್ದರು.
ನಿಟ್ಟೆ ವಿ.ವಿ., ಐಐಸಿ ನಿಟ್ಟೆ, ಎಐಸಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ನಿಟ್ಟೆ ಎಐಸಿ ಸಿಇಒ ಡಾ.ಎ.ಪಿ.ಆಚಾರ್ ಸ್ವಾಗತಿಸಿದರು. ಎಐಸಿ ನಿಟ್ಟೆಯ ಪುನೀತ್ ರೈ, ದಿವ್ಯಾ ಸಮನ್ವಯಗೊಳಿಸಿದರು. ಡಾ.ಸುಧೀರ್ ರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.
