ರಂಗೋಲಿಯಲ್ಲಿ 'ವೈವಿಧ್ಯದಲ್ಲಿ ಏಕತೆ': ಇದು ಮಂಗಳೂರು ಪೊಲೀಸ್ ಹಬ್ಬದ ವಿಶೇಷ

ಮಂಗಳೂರು, ಎ. 9: ಪೊಲೀಸ್ ಕುಟುಂಬ ಸಮ್ಮಿಲನಕ್ಕೆ ಸಾಕ್ಷಿಯಾಗಿ ಆಯೋಜಿಸಲಾಗಿರುವ ಮಂಗಳೂರು ನಗರ ಪೊಲೀಸ್ ಹಬ್ಬದಲ್ಲಿ ವೈವಿಧ್ಯದಲ್ಲಿ ಏಕತೆಯನ್ನು ಸಾರುವ (ಯುನಿಟಿ ಇನ್ ಡೈವರ್ಸಿಟಿ) ರಂಗೋಲಿ ಗಮನಸೆಳೆಯುತ್ತಿದೆ.
ನಗರದ ಫಾದರ್ ಮುಲ್ಲರ್ ಸಂಸ್ಥೆಯ ಸಭಾ ಭವನದಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಆಯೋಜಿಸಲಾಗಿರುವ ಪೊಲೀಸ್ ಹಬ್ಬ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಕುಟುಂಬದ ಸದಸ್ಯರಿಗಾಗಿ ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 100ಕ್ಕೂ ಅಧಿಕ ಮಂದಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 25ಕ್ಕೂ ಅಧಿಕ ಬಣ್ಣ ಬಣ್ಣದ ರಂಗೋಲಿ ಬಿಡಿಸುವ ಮೂಲಕ ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ.
ಚುಕ್ಕೆ ಮತ್ತು ಸಹಳ ಗೈ ಚಿತ್ರ ವಿಭಾಗಗಳಲ್ಲಿ ರಂಗೋಲಿ ಸ್ಪರ್ಧೆ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದಲ್ಲದೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ಸುಡೊಕು ಅಂಕಿಗಳ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಸಭಾ ಭವನದ ಎರಡು ಮಹಡಿಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು, ಸಂಜೆಯ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಸಭಾ ಭವನದಲ್ಲಿ ನಡೆಯಲಿದೆ.
ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಡಿಸಿಪಿ ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸ್ಪರ್ಧಿಗಳ ಜತೆ ಮಾತನಾಡಿ ಹುರಿದುಂಬಿಸಿದರು.
‘‘ಇದೊಂದು ಪೊಲೀಸ್ ಕುಟುಂಬ ಸಮ್ಮಿಲನ ಕಾರ್ಯಕ್ರಮ. ಕಳೆದ ವರ್ಷದಂತೆ ಈ ವರ್ಷವೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅಧಿಕಾರಿ, ಸಿಬ್ಬಂದಿ ಎಂಬ ಯಾವುದೇ ಬೇಧಬಾವವಿಲ್ಲದೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ತಿಂಗಳ ಎರಡನೇ ಶನಿವಾರ ಆದ್ದರಿಂದ ನ್ಯಾಯಾಲಯಕ್ಕೆ ರಜೆ ಇರುತ್ತದೆ. ಹಾಗಾಗಿ ಪೊಲೀಸರಿಗೂ ಕೆಲಸದ ಒತ್ತಡ ಕಡಿಮೆ ಇರುವುದರಿಂದ ಕುಟುಂಬದ ಸದಸ್ಯರು ಸೇರಿದಂತೆ ಪೊಲೀಸರು ಈಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿದೆ.’’
-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.