ವಕ್ಫ್ ಬೋರ್ಡ್ ಬ್ಯಾನ್ ಅಭಿಯಾನ: ಸಿಎಂ ಬೊಮ್ಮಾಯಿ ಹೇಳಿದ್ದೇನು?

ಬೀದರ್, ಎ. 9: ‘ಸರಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ವಕ್ಫ್ ಬೋರ್ಡ್ ಬ್ಯಾನ್ ಅಭಿಯಾನಕ್ಕೂ ರಾಜ್ಯ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಗುರಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರವರ ಸಂಪ್ರದಾಯವನ್ನು ಅವರು ಆಚರಣೆ ಮಾಡುತ್ತಾರೆ. ಸರಕಾರ ಕಾನೂನಿನ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಉಳಿದಂತೆ ಅಭಿಯಾನಗಳಿಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದರು.
‘ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸರ್ಜೇವಾಲ ಅವರ ಬಿಟ್ ಕಾಯಿನ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ‘ನಾನು ಈಗಾಗಲೇ ವಿಧಾನಸಭೆಯಲ್ಲಿಯೇ ಈ ಬಗ್ಗೆ ತಿಳಿಸಿದ್ದೇನೆ. ಏನಾದರೂ ಮಾಹಿತಿ ಇದ್ದರೆ ಕೊಡಲಿ. ಅದು ಬಿಟ್ಟು ಸುಮ್ಮನೇ ಟ್ವೀಟ್ ಮಾಡಿದರೆ ಅರ್ಥವಿಲ್ಲ' ಎಂದು ವಿವರಣೆ ನೀಡಿದರು.
ಸಮಗ್ರ ಅಭಿವೃದ್ಧಿಯ ಚಿಂತನೆ: ‘ಸಮಾಜ ಸುಧಾರಕ ಬಸವಣ್ಣನ ನಾಡು ಕಲ್ಯಾಣಕ್ಕೆ ಆಗಮಿಸಿದ್ದು, ಬಹಳ ಸಂತೋಷವಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿಯ ಚಿಂತನೆ ಹೊತ್ತು ನಾನು ಇಲ್ಲಿಗೆ ಬಂದಿದ್ದೇನೆ' ಎಂದು ಅವರು ಇದೇ ವೇಳೆ ತಿಳಿಸಿದರು.







