ಬ್ರಹ್ಮಾವರ-ಸೀತಾನದಿ ರಸ್ತೆ ಅಗಲೀಕರಣಕ್ಕೆ 33 ಕೋಟಿ ರೂ.
ಉಡುಪಿ : ಈಗಾಗಲೇ ಬ್ರಹ್ಮಾವರದಿಂದ ಚೇರ್ಕಾಡಿವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಬ್ರಹ್ಮಾವರ-ಹೆಬ್ರಿ-ಸೀತಾನದಿ ಚತುಷ್ಪಥ ರಸ್ತೆಯ ಉಳಿದ ಕಾಮಗಾರಿಗೆ ೩೩ ಕೋಟಿ ರೂ. ಮಂಜೂರಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಬ್ರಹ್ಮಾವರ-ಸೀತಾನದಿ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯ ಕುರಿತು ಇಲಾಖಾ ಅಧಿಕಾರಿಗಳ ಜೊತೆ ಭಟ್ ಇತ್ತೀಚೆಗೆ ಚರ್ಚೆ ನಡೆಸಿದರು. ಚೇರ್ಕಾಡಿಯಿಂದ ಮುಂದುವರಿದ ಕಾಮಗಾರಿಗೆ ತಮ್ಮ ಶಿಫಾರಸ್ಸಿನಂತೆ ೩೩ ಕೋಟಿ ರೂ. ಅನುದಾನ ಮಂಜೂರಾಗಿರುವುದಾಗಿ ಅವರು ತಿಳಿಸಿದರು.
ಈ ರಸ್ತೆ ಕಾಮಗಾರಿಯನ್ನು ಕಂದಾಯ, ಅರಣ್ಯ, ಮೆಸ್ಕಾಂ, ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯದೊಂದಿಗೆ ಪೂರ್ಣಗೊಳಿಸುವ ಬಗ್ಗೆ ಅವರು ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಕಾರ್ಯರೂಪಕ್ಕೆ ತರುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರದ ಉಪಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಆಯುಕ್ತ ರಾಜು ಕೆ, ಮೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಭಟ್, ಚೇರ್ಕಾಡಿ ಗ್ರಾಪಂ ಅಧ್ಯಕ್ಷೆ ರೇಖಾ ಭಟ್, ಕಳ್ತೂರು ಗ್ರಾಪಂ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.