ಪಿ.ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಮೂಟ್ಕೋರ್ಟ್ ಸ್ಪರ್ಧೆ; ಬೆಂಗಳೂರಿನ ಕೆಇಲ್ಇ ಕಾಲೇಜಿಗೆ ಅಗ್ರಪ್ರಶಸ್ತಿ

ಜಸ್ಟಿಸ್ ಚಿದಾನಂದ - ಜಸ್ಟಿಸ್ ಉಮಾ
ಉಡುಪಿ : ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ದಲ್ಲಿ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮಾರಕಾರ್ಥ ನಡೆದ ಆರನೇ ವರ್ಷದ ರಾಷ್ಟ್ರಮಟ್ಟದ ಕಲ್ಪಿತ ನ್ಯಾಯಾಲಯ (ಮೂರ್ಟ್ ಕೋರ್ಟ್) ಸ್ಪರ್ಧೆಯಲ್ಲಿ ಬೆಂಗಳೂರಿನ ಕೆ.ಎಲ್.ಇ. ಕಾನೂನು ಮಹಾವಿದ್ಯಾಲಯದ ಸ್ಪರ್ಧಿಗಳು ಅಗ್ರ ಪ್ರಶಸ್ತಿಯನ್ನು ಗೆದ್ದುಕೊಂಡರು.
ಎರಡು ದಿನಗಳ ಕಾಲ ಇಲ್ಲಿ ನಡೆದ ಸ್ಪರ್ಧೆಯಲ್ಲಿ ರನ್ನರ್ಅಪ್ ಸ್ಥಾನ ಮೈಸೂರಿನ ವಿದ್ಯಾವರ್ಧಕ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪಾಲಾದರೆ, ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನ ಶ್ರೇಯಾ ಸಿ. ಶೆಟ್ಟಿ ಅತ್ಯುತ್ತಮ ವಕೀಲೆ ಹಾಗೂ ಬೆಂಗಳೂರಿನ ಕೆ.ಎಲ್.ಇ ಕಾನೂನು ಕಾಲೇಜಿನ ಸತ್ಯನಾರಾಯಣ ಸ್ವಾಮಿ ಸಿ. ಅತ್ಯುತ್ತಮ ವಕೀಲ ಬಹುಮಾನಗಳನ್ನು ಗೆದ್ದುಕೊಂಡರು.
ಬಿಹಾರದ ಸೆಂಟ್ರಲ್ ಯೂನಿವರ್ಸಿಟಿ ಆಫ್ ಸೌತ್ ಬಿಹಾರದ ಕಾನೂನು ಕಾಲೇಜು ಅತ್ಯುತ್ತಮ ತಂಡವಾಗಿ ಬಹುಮಾನವನ್ನು ಪಡೆಯಿತು.
ಇಂದು ನಡೆದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂ.ಜಿ.ಉಮಾ, ಭಾರತದ ನ್ಯಾಯಾಂಗ ವ್ಯವಸ್ಥೆಯು ಶ್ರೇಷ್ಠ ನ್ಯಾಯಾಧೀಶರು ಹಾಗೂ ವಕೀಲರಿಂದ ಹಂತ ಹಂತವಾಗಿ ಕಟ್ಟಲ್ಪಟ್ಟ ಒಂದು ಮಹಾನ್ ಸಂಸ್ಥೆ. ಇಂದು ಜನರು ಪ್ರಜಾಪ್ರಭುತ್ವದ ಇತರ ಅಂಗಗಳ ಮೇಲಿನ ಭರವಸೆಯನ್ನು ಕಳೆದುಕೊಂಡು ನ್ಯಾಯಾಲಯಗಳನ್ನು ಕೊನೆಯ ಭರವಸೆಯಾಗಿ ನೋಡುತ್ತಿದ್ದಾರೆ. ಇದು ಭವಿಷ್ಯದ ವಕೀಲರಾದ ಇಂದಿನ ಕಾನೂನು ವಿದ್ಯಾರ್ಥಿಗಳ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ವಕೀಲರು ನ್ಯಾಯಾಲಯದ ಅವಿಭಾಜ್ಯ ಅಂಗವಾಗಿದ್ದು, ನ್ಯಾಯದಾನ ವ್ಯವಸ್ಥೆಯಲ್ಲಿ ನ್ಯಾಯಾಧೀಶರಿಗೆ, ಕಕ್ಷಿದಾರರಿಗೆ ಹಾಗೂ ಸಹ ವಕೀಲರಿಗೆ ಸಹಾಯ ಮಾಡಬೇಕೆಂದು ಅವರು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವದ್ಯಾಲಯದ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಸರಕಾರ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.(ಡಾ.) ಚಿದಾನಂದ ರೆಡ್ಡಿ ಎಸ್.ಪಾಟೀಲ್ ಮಾತನಾಡಿ, ಕಾನೂನು ವೃತ್ತಿ, ಉಳಿದ ವೃತ್ತಿಗಳಂತೆ ಸಾಮಾನ್ಯ ನುರಿತ ಚಟುವಟಿಕೆಗಳಿಂದ ಕೂಡಿದ ವೃತ್ತಿಯಲ್ಲ. ಇದು ಜ್ಞಾನಾಧಾರಿತ ವೃತ್ತಿಯಾಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಯಾವುದೇ ಸರಕಾರಗಳು ಸಂವಿಧಾನ ಮತ್ತು ಪ್ರಜಾಪಭುತ್ವ ತತ್ವಗಳಿಗೆ ವಿರುದ್ದವಾಗಿ ವರ್ತಿಸಿದಾಗ ರಕಾರದ ವಿರುದ್ಧ ನಿಲ್ಲುವ, ಅದನ್ನು ಖಂಡಿಸುವ ಹಾಗೂ ಸರಕಾರದ ವಿರುದ್ದ ಪ್ರಕರಣಗಳನ್ನು ಹೂಡಿ ಹೋರಾಡುವ ವೃತ್ತಿಯಾಗಿದೆ ಎಂದರು.
ವಕೀಲ ವೃತ್ತಿಯು ಸರಕಾರದ ಹಸ್ತಕ್ಷೇಪವಿಲ್ಲದ, ಸ್ವಾಯತ್ತ ಮತ್ತು ಸ್ವತಂತ್ರ ವೃತ್ತಿಯಾಗಿದ್ದು ನ್ಯಾಯಾಂಗದ ಸಾಂಸ್ಥಿಕ ಸಮಗ್ರತೆ, ಸಂವಿಧಾನಿಕ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದ್ದವಾಗಿ ವಕೀಲರು ಕಾರ್ಯ ನಿರ್ವಹಿಸಬೇಕು ಹಾಗೂ ಕಾನೂನು ವಿದ್ಯಾರ್ಥಿಗಳು ಪ್ರಸಿದ್ದ ನ್ಯಾಯಾಧೀಶರ ಹಾಗೂ ವಕೀಲರ ಆತ್ಮಚರಿತ್ರೆ, ಜೀವನ ಚರಿತ್ರೆ ಪುಸ್ತಕಗಳನ್ನು ಅಭ್ಯಸಿಸಿ ವೃತ್ತಿಯಲ್ಲಿ ಯಶಸ್ವಿಯಾಗ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಸ್ವಾಗತಿಸಿ, ಸಹಾಯಕ ಪ್ರಾದ್ಯಾಪಕ ರಘನಾಥ್ ಕೆ.ಎಸ್. ವಂದಿಸಿದರು. ವಿದ್ಯಾರ್ಥಿನಿ ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.