‘ತ್ವಿಷ-2022’ ರಾಷ್ಟ್ರೀಯ ಸಮ್ಮೇಳನ ಸಮಾರೋಪ
ಉಡುಪಿ : ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉಡುಪಿಯ ಅಗದತಂತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ ಸಮ್ಮೇಳನ ‘ತ್ವಿಷ- 2022’ರ ಸಮಾರೋಪ ಸಮಾರಂಭ ಇಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಯು.ಎನ್. ಪ್ರಸಾದ್, ಇಂದಿನ ಜೀವನ ಶೈಲಿ ಹಾಗೂ ಕಲುಷಿತ ವಾತಾವರಣದಿಂದ ನಿತ್ಯವೂ ವಿಷಪೂರಿತ ಅಂಶಗಳು ಮಾನವನ ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ಅವುಗಳ ಪ್ರಭಾವವನ್ನು ತಗ್ಗಿಸಿ ಆರೋಗ್ಯಪೂರ್ಣ ಶರೀರವನ್ನು ಪಡೆಯಲು ಆಯುರ್ವೇದ ವೈದ್ಯ ಪದ್ಧತಿ ಸಹಕಾರಿಯಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಮಮತಾ ಕೆ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ಉಪಯೋಗಿಸುವ ಹಲವು ವಸ್ತುಗಳು, ಆಹಾರ ಪದಾರ್ಥಗಳು ವಿಷದಿಂದ ಕೂಡಿದ್ದು, ಅನೇಕ ರೋಗ ಗಳನ್ನು ಉಂಟು ಮಾಡುತ್ತಿವೆ. ಅವುಗಳ ಚಿಕಿತ್ಸೆಗೆ ಆಯುರ್ವೇದ ಪದ್ಧತಿಯು ಸೂಕ್ತವಾದುದು ಎಂದು ತಿಳಿಸಿದರು.
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಉಪಸ್ಥಿತರಿದ್ದರು. ರಿಸರ್ಚ್ ಮೆಥೊಡೋಲಜಿ ಮತ್ತು ಮೆಡಿಕಲ್ ಸ್ಟ್ಯಾಟಿಸ್‌ಸ್ಟಿಕ್ ವಿಭಾಗದ ಮುಖ್ಯಸ್ಥ ಡಾ.ಪದ್ಮಕಿರಣ್ ಸಿ. ಕಾರ್ಯಕ್ರಮದ ವರದಿ ವಾಚಿಸಿದರು.
ಇದೇ ಸಂದರ್ಭದಲ್ಲಿ ಉತ್ತಮ ಪ್ರಬಂಧಗಳನ್ನು ಮಂಡಿಸಿದ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಲಾಯಿತು. ಸ್ನಾತಕ ವಿಭಾಗದ ಡೀನ್ ಡಾ. ವೀರ ಕುಮಾರ ಕೆ. ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಶ್ರೀನಿಧಿ ಆರ್. ವಂದಿಸಿದರು. ಅಗದತಂತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ರೇಖಾ ಹಾಗೂ ಅಂತಿಮ ವರ್ಷದ ಸ್ನಾತಕ ವಿದ್ಯಾರ್ಥಿನಿ ನಸೀರ ಕಾರ್ಯಕ್ರಮ ನಿರೂಪಿಸಿದರು.