ಮಂಗಳೂರು: ಗುಡುಗು, ಮಿಂಚು ಸಹಿತ ಮಳೆ
ಮಂಗಳೂರು : ದ.ಕ.ಜಿಲ್ಲೆಯ ಹಲವು ಕಡೆ ಅದರಲ್ಲೂ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಕೆಲವು ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಈ ಮಳೆ ಒಂದಷ್ಟು ಆಹ್ಲಾದಕರ ವಾತಾವರಣವನ್ನುಂಟು ಮಾಡಿತು.
ಶುಕ್ರವಾರ ರಾತ್ರಿಯೂ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಕೆಲವು ಕಡೆ ಉತ್ತಮ ಮಳೆಯಾಗಿದ್ದರೆ, ನಗರದಲ್ಲಿ ಸಾಧಾರಣ ಮಳೆಯಾಗಿತ್ತು.
ಶನಿವಾರ ದಿನವಿಡೀ ಮೋಡಕವಿದ ವಾತಾವರಣದ ಮಧ್ಯೆಯೂ ನಗರದಲ್ಲಿ ಭಾರೀ ಸೆಖೆಯಿತ್ತು. ಸಂಜೆ ಸುಮಾರು ೭:೩೦ಕ್ಕೆ ಸುರಿಯತೊಡಗಿದ ಮಳೆ ಬಳಿಕ ಬಿರುಸುಪಡೆಯತೊಡಗಿತು. ಹಾಗಾಗಿ ಸಂಜೆಯ ನಂತರ ನಡೆಯುತ್ತಿದ್ದ ಬಹುತೇಕ ಸಭಾ ಕಾರ್ಯಕ್ರಮಗಳಿಗೆ ಮಳೆ ಅಡಚಣೆಯುಂಟು ಮಾಡಿದೆ.
ನಗರದ ಹಲವು ಪ್ರಮುಖ ರಸ್ತೆಗಳ ಇಕ್ಕಡೆಗಳ ಒಳಚರಂಡಿಯ ಹೂಳು ತೆಗೆಯದ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಯೇ ತೋಡುಗಳಾಗಿ ಮಾರ್ಪಟ್ಟವು.
ಬೆಳ್ತಂಗಡಿ, ಉಪ್ಪಿನಂಗಡಿ, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯದಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ. ಕುಮಾರಧಾರಾ ಸ್ನಾನಘಟ್ಟದಲ್ಲಿ ಮರವೊಂದು ಬಿದ್ದು ಕಾರಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗಿನವರೆಗೆ ಸುಳ್ಯ ೨ ಸೆ.ಮೀ, ಧರ್ಮಸ್ಥಳ, ಬೆಳ್ತಂಗಡಿ, ಮಂಗಳೂರಿನಲ್ಲಿ ತಲಾ ೧ ಸೆ.ಮೀ ಮಳೆಯಾಗಿದೆ. ಮುಂದಿನ ನಾಲ್ಕು ದಿನವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ.