ವಿದೇಶದಿಂದ ಸಾಲ ಪಡೆಯದೆ ನಮಗೆ ಬೇರೆ ಆಯ್ಕೆಯಿಲ್ಲ: ಶ್ರೀಲಂಕಾ

Ali sabry(photo:twitter)
ಕೊಲಂಬೊ, ಎ.9: ಮುಂದಿನ 6 ತಿಂಗಳೊಳಗೆ ಸುಮಾರು 3 ಬಿಲಿಯನ್ ಡಾಲರ್ ವಿದೇಶಿ ನೆರವು ದೊರೆತರೆ ಮಾತ್ರ ದೇಶದಲ್ಲಿನ ಅಗತ್ಯ ವಸ್ತುಗಳ ಪೂರೈಕೆಯನ್ನು ಕ್ರಮಬದ್ಧಗೊಳಿಸಲು ಮತ್ತು ದೇಶಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸಲು ಸಾಧ್ಯ ಎಂದು ಶ್ರೀಲಂಕಾದ ವಿತ್ತ ಸಚಿವ ಅಲಿ ಸಬ್ರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ಶನಿವಾರ ವರದಿ ಮಾಡಿದೆ.ಇದೊಂದು ಕಠಿಣ ಕಾರ್ಯವಾಗಿದೆ. ಸಾಲ ಮರುಪಾವತಿಸಲು ಬಾಕಿ(ಹಾರ್ಡ್ ಡಿಫಾಲ್ಟ್) ಸ್ಥಿತಿ ಬರಬಾರದು ಎಂದು ಗರಿಷ್ಟಪ್ರಯತ್ನ ಮಾಡುತ್ತಿದ್ದೇವೆ. ಹಾರ್ಡ್ ಡಿಫಾಲ್ಟ್ ಪ್ರಕ್ರಿಯೆಯ ಪರಿಣಾಮದ ಅರಿವು ನಮಗಿದೆ ಎಂದು ಆಲಿ ಸಬ್ರಿ ಹೇಳಿದ್ದಾರೆ. ತತ್ಕಾಲಕ್ಕೆ 3 ಬಿಲಿಯನ್ ಡಾಲರ್ ಆರ್ಥಿಕ ನೆರವು ಪಡೆಯಲು ಈ ತಿಂಗಳು ಶ್ರೀಲಂಕಾವು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಜತೆ ಚರ್ಚೆ ನಡೆಸಲಿದೆ.
ಅಂತರಾಷ್ಟ್ರೀಯ ಸೊವರಿನ್ ಬಾಂಡ್ ಸಾಲ(ಸರಕಾರ ಪಡೆದ ಸಾಲ)ವನ್ನು ಪುನರ್ರಚಿಸಲು ಮತ್ತು ಮರುಪಾವತಿಗೆ ಇನ್ನಷ್ಟು ಅವಧಿ ಪಡೆಯುವುದು ಶ್ರೀಲಂಕಾದ ಉದ್ದೇಶವಾಗಿದೆ. ಜುಲೈಯಲ್ಲಿ ಶ್ರೀಲಂಕಾ 1 ಬಿಲಿಯನ್ ಡಾಲರ್ ಸೊವರಿನ್ ಬಾಂಡ್ ಸಾಲವನ್ನು ಮರುಪಾವತಿಸಬೇಕು. ಈ ವರ್ಷ ಶ್ರೀಲಂಕಾದ ಒಟ್ಟು ಬಾಕಿಸಾಲದ ಮೊತ್ತದ 7 ಬಿಲಿಯನ್ ಡಾಲರ್ಗೆ ಏರಲಿದೆ ಎಂದು ಜೆಪಿ ಮಾರ್ಗನ್ ಆರ್ಥಿಕ ಸಲಹೆ ಸಂಸ್ಥೆ ಅಂದಾಜಿಸಿದೆ. ಶ್ರೀಲಂಕಾ ಪಾವತಿಸಬೇಕಿರುವ ಒಟ್ಟು ಅಂತರಾಷ್ಟ್ರೀಯ ಸೊವರಿನ್ ಬಾಂಡ್ ಸಾಲದ ಮೊತ್ತ 12.55 ಬಿಲಿಯನ್ ಡಾಲರ್ ಆಗಿದ್ದು ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಕೇವಲ 1.93 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ದಾಸ್ತಾನು ಇದೆ ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ವರದಿ ಮಾಡಿದೆ.
ತೈಲ, ಇಂಧನ, ಅನಿಲ, ಔಷಧ, ವಿದ್ಯುತ್ ಹೀಗೆ ಅತ್ಯಗತ್ಯದ ವಸ್ತುಗಳ ಪೂರೈಕೆ ಸರಪಳಿಯನ್ನು ಕ್ರಮಬದ್ಧಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ವಿತ್ತಸಚಿವ ಆಲಿ ಸಬ್ರಿ ಹೇಳಿದ್ದಾರೆ.







