ಮಾನವ ಹಕ್ಕು ಉಲ್ಲಂಘನೆ ಆರೋಪ: ಅಮೆರಿಕದ 24 ಅಧಿಕಾರಿಗಳಿಗೆ ಇರಾನ್ ನಿರ್ಬಂಧ

PHOTO:TWITTER
ಟೆಹ್ರಾನ್, ಎ.9: ಭಯೋತ್ಪಾದನೆ ಮತ್ತು ಇರಾನ್ ಜನತೆಯ ಮಾನವ ಹಕ್ಕು ಉಲ್ಲಂಘಿಸಿದ ಆರೋಪದಲ್ಲಿ ಅಮೆರಿಕದ 24 ಅಧಿಕಾರಿಗಳನ್ನು ನಿಷೇಧದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಇರಾನ್ ಘೋಷಿಸಿದೆ.
ಅಮೆರಿಕದ ಸೇನಾಪಡೆಯ ಮಾಜಿ ಮುಖ್ಯಸ್ಥ ಮತ್ತು ಇರಾಕ್ ನಲ್ಲಿ ಕಾರ್ಯನಿರ್ವಹಿಸಿದ್ದ ಬಹುರಾಷ್ಟ್ರೀಯ ಪಡೆಯ ಕಮಾಂಡಿಂಗ್ ಜನರಲ್ ಜಾರ್ಜ್ ಡಬ್ಲ್ಯೂ ಕ್ಯಾಸಿ ಜೂನಿಯರ್, ಮಾಜಿ ಸೇನಾಧಿಕಾರಿ ಜೋಸೆಫ್ ವೊಟೆಲ್, ಮತ್ತು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಅಟಾರ್ನಿಯಾಗಿ ಕಾರ್ಯ ನಿರ್ವಹಿಸಿದ್ದ ರೂಡಿ ಗ್ಯುಲಾನಿ, ಪೆಲೆಸ್ತೀನ್ ಮತ್ತು ಲೆಬನಾನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಸಹಿತ 9 ಅಧಿಕಾರಿಗಳನ್ನು ಭಯೋತ್ಪಾದಕ ಕೃತ್ಯದ ಆರೋಪದಲ್ಲಿ ನಿಷೇಧದ ಪಟ್ಟಿಗೆ ಸೇರಿಸಲಾಗಿದೆ.
ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆಗಾಗಿ 15 ವ್ಯಕ್ತಿಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಶನಿವಾರ ಘೋಷಿಸಿದೆ. ಇವರಲ್ಲಿ ಹೆಚ್ಚಿನವರು ಟ್ರಂಪ್ ಮತ್ತು ಒಬಾಮ ಆಡಳಿತದ ಸಂದರ್ಭ ಇರಾನ್ ವಿರುದ್ಧದ ನಿರ್ಬಂಧಗಳನ್ನು ವಿಸ್ತರಿಸಲು ನೆರವಾದವರು ಎಂದು ವರದಿಯಾಗಿದೆ. ‘ಏಕಪಕ್ಷೀಯ ದಬ್ಬಾಳಿಕೆಯ ಕ್ರಮಗಳ ಘೋಷಣೆ ಮತ್ತು ಅನ್ವಯವು ವಿಶ್ವಸಂಸ್ಥೆಯ ಸನ್ನದಿನಲ್ಲಿ ಸೂಚಿಸಿದ ಅಂತರಾಷ್ಟೀಯ ಕಾನೂನಿನ ಮೂಲಭೂತ ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಮಾನವಹಕ್ಕುಗಳನ್ನು ಮೊಟಕುಗೊಳಿಸುವ ಕ್ರಮವಾಗಿದೆ’ ಎಂದು ಅಮೆರಿಕವನ್ನು ಪರೋಕ್ಷವಾಗಿ ಉಲ್ಲೇಖಿಸಿ ಇರಾನ್ ವಿದೇಶ ಸಚಿವಾಲಯ ಹೇಳಿಕೆ ನೀಡಿದೆ.







