ಸಂಪಾಜೆ; ಅಪಘಾತದಿಂದ ಒಂದೇ ಮನೆಯ ನಾಲ್ವರು ಮೃತ್ಯು ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ

ಸುಳ್ಯ : ಸಂಪಾಜೆಯ ಕಡೆಪಾಲ ಎಂಬಲ್ಲಿ ಏಳು ವರ್ಷಗಳ ಹಿಂದೆ ನಡೆದ ಕಾರು - ಟಿಪ್ಪರ್ ಅಪಘಾತ ಪ್ರಕರಣದಲ್ಲಿ ಒಂದೇ ಮನೆಯ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಟಿಪ್ಪರ್ ಚಾಲಕ ಹಾಗೂ ಮಾಲಕರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ತೀರ್ಪು ನೀಡಿದ್ದಾರೆ.
2015ರ ಫೆಬ್ರವರಿ 18ರಂದು ಮರಳು ತುಂಬಿದ ಟಿಪ್ಪರ್ ವಾಹನ ಕಾರಿಗೆ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಪಂಜದ ಸಾಮಾಜಿಕ ಧುರೀಣ ಲಕ್ಷ್ಮೀನಾರಾಯಣ ಭೀಮಗುಳಿ, ಅವರ ಪುತ್ರ ಜೇಸಿಐ ಪೂರ್ವಾಧ್ಯಕ್ಷ ಅವಿನಾಶ್ ಭೀಮಗುಳಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದರು.
ಈ ಪ್ರಕರಣದ ಆರೋಪಿ, ಟಿಪ್ಪರ್ ಚಾಲಕ ಬೆಳ್ತಂಗಡಿ ಮೂಲದ ಇಸ್ಮಾಯಿಲ್ ಹಾಗೂ ಟಿಪ್ಪರ್ ಮಾಲಕ ಮಹಮ್ಮದ್ ರಫೀಕ್ ಎಂಬವರಿಗೆ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ ಎ ಅವರು ಎರಡು ವರ್ಷ ಜೈಲು ಶಿಕ್ಷೆ, 3000 ರೂ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಎಪಿಪಿ ಜನಾರ್ಧನ್ ವಾದಿಸಿದ್ದರು.





