ಹಳೆಯಂಗಡಿ: ಪಾವಂಜೆ ಸೇತುವೆ ಬಳಿ ತಾತ್ಕಾಲಿಕ ಘನತ್ಯಾಜ್ಯ ವಿಲೇವಾರಿ ಘಟಕ
ಶೀಘ್ರ ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರ ಆಗ್ರಹ
ಹಳೆಯಂಗಡಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಂಜೆ ಸೇತುವೆ ಬಳಿ ತಾತ್ಕಾಲಿಕ ತ್ಯಾಜ್ಯ ಶೇಖರಣಾ ಘಟಕ ಆರಂಭವಾಗಿದ್ದು, ಪಂಚಾಯತ್ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಸೇತುವೆ ಬಳಿ ಅನೇಕ ದಿನಗಳಿಂದ ಕಸದ ರಾಶಿ ರಾಶಿಗಳು ಬಿದ್ದಿದ್ದು, ಸದ್ಯ ತಾತ್ಕಾಲಿಕ ತ್ಯಾಜ್ಯ ವಿಲೇವಾರಿ ಘಟಕದಂತಾಗಿದೆ.
ಕಸದ ರಾಶಿ ಇರುವ ಪ್ರದೇಶ ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡಿದೆ. ಹಾಗಾಗಿ ವಾಹನಗಳ ಗಾಳಿಗೆ ಅಲ್ಲಿರುವ ಪ್ಲಾಸ್ಟಿಕ್ ಕೈಚೀಲಗಳು ಗಾಳಿಗೆ ರಸ್ತೆಯಲ್ಲಿ ಓಡಾಡುವ ವಾಹನಗಳು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆರಗುತ್ತಿದೆ. ಇದರಿಂದಾಗಿ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವಂತಾಗಿದೆ. ಅಲ್ಲದೆ, ಈ ಪ್ರದೇಶ ರಾಷ್ಟ್ರೀಯ ಹೆದ್ದಾರಿ ಯಾಗಿರುವ ಕಾರಣ ಪ್ರವಾಸಿಗರು ಎಲ್ಲೆಂದರಲ್ಲಿ ಊಟ ಮಾಡಿ, ಬಳಿಕ ತ್ಯಾಜ್ಯ, ಪ್ಲೇಟುಗಳನ್ನೂ ಇಲ್ಲೇ ಬಿಸಾಡಿ ಹೋಗುತ್ತಿದ್ದಾರೆ. ಕಸದ ರಾಶಿಯ ಮಧ್ಯೆ ಬಳಕೆಗೆ ಬಾರದ ಗೃಹಪಯೋಗಿ ವಸ್ತುಗಳು ಹಾಗೂ ಅತಿಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಕೈ ಚೀಲಗಳು ತುಂಬಿ ತುಳುಕುತ್ತಿವೆ. ಇದು ಗ್ರಾಮದ ಸೌಂದರ್ಯ ಹಾಗೂ ಜನರ ಜೀವಕ್ಕೂ ಮಾರಕವಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಶೀಘ್ರ ಎಚ್ಚೆತ್ತುಕೊಂಡು ಕಸ ವಿಲೇವಾರಿ ಘಟಕದಂತಿರುವ ಪಾವಂಜೆ ಸೇತುವೆ ಸಮೀಪದ ಕಸದರಾಶಿಯನ್ನು ತೆರವು ಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





