ಮಂಗಳೂರು: ವಿಶ್ವ ಕೊಂಕಣಿ ದಿನಾಚರಣೆ

ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಮತ್ತು ಕೊಂಕಣಿ ಭಾಷಾ ಮಂಡಲ ಕರ್ನಾಟಕ ಇವುಗಳ ಜಂಟಿ ಆಶ್ರಯದಲ್ಲಿ ಕೊಂಕಣಿ ಪಿತಾಮಹ ಶೈಣೈ ಗೋಂಯ್‌ಬಾಬ್ ಅವರ ಸ್ಮರಣಾರ್ಥ ನಗರದ ಕದ್ರಿಯ ಸಿ.ವಿ. ನಾಯಕ್ ಹಾಲ್‌ನಲ್ಲಿ ಶನಿವಾರ ವಿಶ್ವ ಕೊಂಕಣಿ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವೈದ್ಯ ಡಾ. ಕೆ. ಮೋಹನ್ ಪೈ ಯಾವುದೇ ಒಂದು ಭಾಷೆ ಉಳಿಯಲು ಜನರ ಬೆಂಬಲ ಹಾಗೂ ಸರಕಾರದ ಪ್ರೋತ್ಸಾಹ ಅಗತ್ಯ. ಕೊಂಕಣಿ ಭಾಷೆ ಉಳಿಯ ಬೇಕಾದರೆ ಕೊಂಕಣಿ ಜನರು ತಮ್ಮ ಮಾತೃ ಭಾಷೆಯನ್ನು ವ್ಯವಹಾರದಲ್ಲಿ ಬಳಕೆ ಮಾಡಿಕೊಂಡು ಬರುವ ಅಗತ್ಯವಿದೆ ಎಂದರು.
ಕೊಂಕಣಿಯ ತವರೂರಾದ ಗೋವಾದಲ್ಲಿ ತನ್ನ ಮಾತೃ ಭಾಷೆ ಉಳಿಯ ಬೇಕು; ಅದು ಅಳಿದು ಹೋಗಲು ಬಿಡ ಬಾರದು ಎಂದು ಶೆಣೈ ಗೋಂಯ್‌ಬಾಬ್ ಆಂದೋಲನ ನಡೆಸಿದ್ದರು. ಇದರಿಂದಾಗಿ ಗೋವಾದಲ್ಲಿ ಕೊಂಕಣಿ ಜನರ ಆತ್ಮ ಗೌರವ ಜಾಗೃತವಾಗಿತ್ತು. ಅವರ ಸಾಧನೆ ಮತು ಬದುಕು ಕೊಂಕಣಿಯನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ನಮಗೆ ಪ್ರೇರಕ ಶಕ್ತಿಯಾಗಿದೆ ಎಂದು ಡಾ. ಕೆ. ಮೋಹನ್ ಪೈ ಹೇಳಿದರು.
ಮಂಗಳಾ ಭಟ್, ಚಂದ್ರಿಕಾ ಮಲ್ಯ, ವಂ. ಜೇಸನ್ ಪಿಂಟೊ ಅವರು ಶೆಣೈ ಗೋಂಯ್ ಬಾಬ್‌ರ ಕೃತಿಗಳ ವಿಮರ್ಶೆ ಮಾಡಿದರು. ಪ್ರೇಮ್ ಮೊರಾಸ್ ಕೊಂಕಣಿ ಹಾಸ್ಯ ಕವಿ ಗೋಷ್ಠಿಯನ್ನು ನಡೆಸಿಕೊಟ್ಟರು. ಸಾಹಿತಿ ನವೀನ್ ಕುಲಶೇಖರ ಅವರನ್ನು ಸನ್ಮಾನಿಸಲಾಯಿತು. ದೇವನಾಗರಿ ಲಿಪಿಯಲ್ಲಿ ಕೊಂಕಣಿ ಕಲಿತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಶಿಷ್ಯ ವೇತನ, ಕೊಂಕಣಿಯಲ್ಲಿ ಎಂ.ಎ. ಪದವಿ ಪಡೆದವರನ್ನು ಗೌರವಿಸಲಾಯಿತು. ಱಶಾಲೆಯಲ್ಲಿ ಕೊಂಕಣಿ ಕಲಿ ಮಗು ಆಂದೋಲನಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕೊಂಕಣಿ ಭಾಷೆಯ ಕಲಿಕೆ ಬಗ್ಗೆ ಪಠ್ಯ ಮತ್ತು ಪುಸ್ತಕ ರಚನೆಯ ಸಿದ್ಧತೆ ಬಗ್ಗೆ ಡಾ. ಕೆ. ಮೋಹನ್ ಪೈ ಮತ್ತು ವೆಂಕಟೇಶ್ ಎನ್. ಬಾಳಿಗಾ ಮಾಹಿತಿ ನೀಡಿದರು.
ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷ ವೆಂಕಟೇಶ್ ಎನ್. ಬಾಳಿಗಾ ಸ್ವಾಗತಿಸಿದರು. ಕೊಂಕಣಿ ಅಕಾಡಮಿಯ ಸದಸ್ಯ ನವೀನ್ ನಾಯಕ್, ಮುಖಂಡರಾದ ನಿಶಾಂತ್ ಶೇಟ್, ಡಾ. ದೇವದಾಸ್ ಪೈ, ರತ್ನಾಕರ ಕುಡ್ವ, ವಸಂತ ರಾವ್, ಎಂ.ಆರ್. ಕಾಮತ್, ವಿಶ್ವನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.







