ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ಶೀನಪ್ಪ ಪೂಜಾರಿ ನಿಧನ

ಉಪ್ಪಿನಂಗಡಿ: ಸುಮಾರು 25 ವರ್ಷಗಳ ಕಾಲ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯನಾಗಿದ್ದುಕೊಂಡು ತನ್ನ ವಾರ್ಡ್‍ನಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದ ದಡ್ಡು ಶೀನಪ್ಪ ಪೂಜಾರಿ (78) ಅಲ್ಪಕಾಲದ ಅಸೌಖ್ಯದಿಂದ ಎ.9ರಂದು ನಿಧನರಾಗಿದ್ದಾರೆ.
ಶೀನಪ್ಪ ಪೂಜಾರಿಯವರು ಬಿಜೆಪಿ ಕಾರ್ಯಕರ್ತರಾಗಿದ್ದು, ಉಪ್ಪಿನಂಗಡಿಯ 5ನೇ ವಾರ್ಡ್‍ನಲ್ಲಿ ಗ್ರಾ.ಪಂ. ಸದಸ್ಯರಾಗಿದ್ದವರು. ಈ ಸಂದರ್ಭದಲ್ಲಿ ತೀರಾ ಗುಡ್ಡಗಾಡು ಪ್ರದೇಶವಾದ ತನ್ನ ವಾರ್ಡ್‍ನಲ್ಲಿ ಹಲವು ರಸ್ತೆಗಳನ್ನು ನಿರ್ಮಿಸಿ ಪ್ರತಿ ಕಡೆಗಳಿಗೂ ಸಂಪರ್ಕಗಳನ್ನು ಕಲ್ಪಿಸಿದ್ದರು. ವಿಶ್ವ ಬ್ಯಾಂಕ್‍ನ ಕುಡಿಯುವ ನೀರಿನ ಸಂಪರ್ಕ ಬರುವ ಮೊದಲೇ ತನ್ನ ವಾರ್ಡ್‍ನಲ್ಲಿ ಗ್ರಾ.ಪಂ. ವತಿಯಿಂದಲೇ ಕುಡಿಯುವ ನೀರಿನ ಸಂಪರ್ಕಗಳನ್ನು ನೀಡಿ ರಸ್ತೆ ಬದಿಗಳಲ್ಲಿ ನಳ್ಳಿ ನೀರಿನ ವ್ಯವಸ್ಥೆ, ಮನೆಗಳಿಗೆ ನಳ್ಳಿ ನೀರಿನ ಸಂಪರ್ಕವನ್ನು ಕಲ್ಪಿಸಿದ್ದರು. ಆ ಕಾಲದಲ್ಲಿ ಉಪ್ಪಿನಂಗಡಿಯಲ್ಲಿದ್ದ ಅಲೆಮಾರಿ ಜನಾಂಗದವರಿಗೆ ಆರ್ತಿಲದಲ್ಲಿ ನಿವೇಶನ ಒದಗಿಸಿಕೊಟ್ಟು ಅವರೆಲ್ಲಾ ಅಲ್ಲೇ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ್ದರು.
ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಎ.9ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ, ಪುತ್ರರಾದ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ವಕೀಲ ಅನಿಲ್ ಕುಮಾರ್ ದಡ್ಡು ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.





