ಶಾಂತಿಯುತ ಪರಮಾಣು ಕಾರ್ಯಕ್ರಮ ಮುಂದುವರಿಕೆ: ಇರಾನ್ ಘೋಷಣೆ

photo:twitter
ಟೆಹ್ರಾನ್, ಎ.9: ದೇಶದಲ್ಲಿ ಶಾಂತಿಯುತ ಬಳಕೆಗಾಗಿ ಪರಮಾಣು ಅಭಿವೃದ್ಧಿಗೊಳಿಸುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಇರಾನ್ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಶನಿವಾರ ಟೆಹ್ರಾನ್ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಪರಮಾಣು ತಂತ್ರಜ್ಞಾನ ದಿನಾಚರಣೆ ಸಂದರ್ಭ ಪರಮಾಣು ಕ್ಷೇತ್ರದಲ್ಲಿ ದೇಶ ಸಾಧಿಸಿರುವ ಹಲವು ಸಾಧನೆಗಳತ್ತ ಪಕ್ಷಿನೋಟ ಬೀರುವ ಚಿತ್ರಪ್ರದರ್ಶನ ನಡೆಯಿತು. ಅಧ್ಯಕ್ಷ ಇಬ್ರಾಹಿಂ ರೈಸಿ, ಪರಮಾಣು ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಮುಹಮ್ಮದ್ ಇಸ್ಲಾಮಿ ಪಾಲ್ಗೊಂಡಿದ್ದರು. ಕ್ಯಾನ್ಸರ್ ಹರಡದಂತೆ ತಡೆಯಲು ವೈದ್ಯಕೀಯ ಬಳಕೆಯಲ್ಲಿ ಉಪಯೋಗಿಸುವ ರೇಡಿಯೊಫಾರ್ಮಸ್ಯುಟಿಕಲ್ಸ್ ತಂತ್ರಜ್ಞಾನ, ಪ್ಲಾಸ್ಮಾ ತಂತ್ರಜ್ಞಾನದ ಪ್ರಯೋಜನ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಕೋಲ್ಡ್ ಪ್ಲಾಸ್ಮಾ ಚಿಕಿತ್ಸಾ ವಿಧಾನ, ಕೈಗಾರಿಕೆಗಳ ಬಳಕೆಗೆ ಉಪಯೋಗಿಸುವ ಲೇಸರ್ ಆಧಾರಿತ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಈ ಸಂದರ್ಭ ನೀಡಲಾಯಿತು. ಯುರೇನಿಯಂ ಇಂಧನದ ಪ್ಲೇಟ್ಗಳನ್ನು ಉತ್ಪಾದಿಸಲಾಗಿದ್ದು ಇದನ್ನು ಬಳಸಿದರೆ ಪರಮಾಣು ಸ್ಥಾವರದಲ್ಲಿ ಉತ್ಪಾದಿಸುವ ವಿದ್ಯುತ್ನಲ್ಲಿ ಗಮನಾರ್ಹ ಪ್ರಮಾಣದ ಹೆಚ್ಚಳವಾಗಲಿದೆ ಎಂದು ಇರಾನ್ನ ಪರಮಾಣು ಇಂಧನ ಸಂಸ್ಥೆ(ಎಇಒಐ) ಹೇಳಿದೆ. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ರೈಸಿ, ಸ್ವದೇಶಿ ಪರಮಾಣು ಕಾರ್ಯಕ್ರಮದಲ್ಲಿ ಶಾಂತಿಯುತ ಪ್ರಗತಿಯನ್ನು ಬದಲಾಯಿಸಲಾಗದು ಮತ್ತು ಈ ಯೋಜನೆಗೆ ತನ್ನ ಸರಕಾರ ಬೆಂಬಲ ನೀಡಲಿದೆ ಎಂದರು. ಅಂತರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ(ಐಎಇಎ)ಯೊಂದಿಗಿನ ಸಹಕಾರ ಸಂಬಂಧದ ಕುರಿತು ಉಲ್ಲೇಖಿಸಿದ ಅವರು, ಶತ್ರುಗಳ ಹಸ್ತಕ್ಷೇಪ ಇಲ್ಲದ ವೃತ್ತಿಪರ ರೀತಿಯ ಸಂಬಂಧ ಬೆಳೆಸಿಕೊಳ್ಳಲು ಇರಾನ್ ಪ್ರಯತ್ನ ಮುಂದುವರಿಸಲಿದೆ ಎಂದರು.
ಶಾಂತಿಯುತ ಪರಮಾಣು ಕಾರ್ಯಕ್ರಮ ಎಂದು ಹೇಳಿದರೂ ಇರಾನ್ ಗುಪ್ತವಾಗಿ ಪರಮಾಣು ಅಸ್ತ್ರದ ಅಭಿವೃದ್ಧಿಯಲ್ಲಿ ತೊಡಗಿದೆ ಎಂದು ಅಮೆರಿಕ ಸಹಿತ ಹಲವು ದೇಶಗಳು ಆಕ್ಷೇಪಿಸಿದ್ದು, 2015ರಲ್ಲಿ ಇರಾನ್ ಮತ್ತು ಜಾಗತಿಕ ಶಕ್ತ ದೇಶಗಳ ನಡುವಿನ ಒಪ್ಪಂದದ ಪ್ರಕಾರ, ಇರಾನ್ನ ಯುರೇನಿಯಂ ಸಂಸ್ಕರಣಾ ಪ್ರಕ್ರಿಯೆಯನ್ನು 3.67%ಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಈ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಬಳಿಕ ಇರಾನ್ ಕೂಡಾ ಈ ಮಿತಿಯನ್ನು ರದ್ದುಗೊಳಿಸಿದೆ.





