ವಿಮಾನಯಾನ ಸಂಸ್ಥೆಯ ವಿರುದ್ಧ ನ್ಯಾಯಾಲಯ ತೀರ್ಪು: ಕೋವಿಡ್ ಕಾಲದಲ್ಲಿ ನೊಂದಿದ್ದ ಗ್ರಾಹಕಿಗೆ ನ್ಯಾಯ

ಮಂಗಳೂರು : ಕೋವಿಡ್ -೧೯ ಸಂದರ್ಭ ಸರಕಾರ ವಿಧಿಸಿದ ಲಾಕ್‌ಡೌನ್ ಹಿನ್ನೆಲೆಯಲ್ಲಿ ರದ್ದುಗೊಂಡ ವಿಮಾನ ಪ್ರಯಾಣ ದರವನ್ನು ಹಿಂತಿರುಗಿಸದ ಸ್ಪೈಸ್ ಜೆಟ್ ಲಿ.ಗೆ ಶೇ.6 ಬಡ್ಡಿ ಸಹಿತ ಪ್ರಯಾಣ ದರ ಹಾಗೂ ವ್ಯಾಜ್ಯದ ಖರ್ಚನ್ನು ನೀಡುವಂತೆ ದ.ಕ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಆದೇಶಿಸಿದೆ.
ಪುತ್ತೂರಿನ ಮೇರಿ ಮತ್ತವರ ಇಬ್ಬರು ಮಕ್ಕಳು ಬೆಂಗಳೂರಿಗೆ ಹೋಗಲು ಏಜೆಂಟ್ ಮೂಲಕ ಸ್ಪೈಸ್ ಜೆಟ್ ಲಿ.ಸಂಸ್ಥೆಯ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ನಿಗದಿತ ಪ್ರಯಾಣದ ವೇಳೆ ಕೋವಿಡ್-೧೯/ಲಾಕ್‌ಡೌನ್ ಕಾರಣದಿಂದ ವಿಮಾನಯಾನ ಪ್ರಯಾಣ ರದ್ದಾಗಿತ್ತು. ಹಾಗಾಗಿ ಪ್ರಯಾಣದ ವೆಚ್ಚವನ್ನು ಸ್ಪೈಸ್ ಜೆಟ್ ಲಿ.ಮರುಪಾವತಿ ಮಾಡಬೇಕಾಗಿತ್ತು. ಗ್ರಾಹಕರು ಹಲವು ಮನವಿ ಮಾಡಿದರೂ ವಿಮಾನ ಯಾನ ಸಂಸ್ಥೆ ಸ್ಪಂದಿಸಲಿಲ್ಲ. ಬದಲಿಗೆ ಸರ್ವೋಚ್ಚ ನ್ಯಾಯಾಲಯ, ವಾಯುಯಾನ ಸಂಸ್ಥೆಯವರು ರಿ ಶೆಡ್ಯೂಲ್ ಮಾಡಲು ಹೇಳಿರುತ್ತಾರೆ. ಹಾಗಾಗಿ ಅದನ್ನು ಒಂದು ವರ್ಷದ ಒಳಗೆ ಅದೇ ಸೌಲಭ್ಯವನ್ನು ಬೇರೆ ಕಡೆಗೆ ಹೋಗುವುದಿದ್ದರೂ ಪಡೆದುಕೊಳ್ಳಬಹುದು ಎಂದು ಹೇಳಿತ್ತು.
ಹಾಗಾಗಿ ವಕೀಲರ ಮೂಲಕ ನೋಟಿಸ್ ಜಾರಿ ಮಾಡಿದರೂ ಸ್ಪಂದಿಸಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸಂಸ್ಥೆಯವರು ನ್ಯೂನ್ಯತೆಯ ಸೇವೆಯನ್ನು ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯದಲ್ಲಿ ಮೇರಿ ದೂರು ದಾಖಲಿಸಿದ್ದರು.
ವಿಮಾನ ಯಾನ ಸಂಸ್ಥೆಯವರು ನ್ಯಾಯಾಲಯದ ಮುಂದೆ ಹಾಜರಾಗಿ ಮೇರಿಯವರು ಹಣವನ್ನು ಏಜೆಂಟ್ ಮುಖಾಂತರ ತೆಗೆದುಕೊಳ್ಳಬೇಕಿತ್ತು ಮತ್ತು ಸಂಸ್ಥೆಯಿಂದ ಯಾವುದೆ ತಪ್ಪಾಗಿಲ್ಲ ಎಂದು ವಾದಿಸಿದ್ದರು.
ಹಲವು ಬಾರಿ ಸರ್ವೊಚ್ಚ ನ್ಯಾಯಾಲಯ ಮಾಡಿದ ಆದೇಶಗಳನ್ನು ಇನ್ನಿತರ ಸಂದರ್ಭಗಳನ್ನು ಉಲ್ಲೇಖಿಸಿ ಕೋವಿಡ್-19 ಕಾರಣದಿಂದ ಪ್ರಯಾಣ ರದ್ದಾದ ಕಾರಣ ಸರಕಾರ ಮತ್ತು ಸರ್ವೊಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಟಿಕೆಟ್‌ನ ಪೂರ್ಣ ಹಣವನ್ನು ಮರಳಿ ಕೊಡಬೇಕು. ವಿಳಂಬ ಮಾಡಿದ್ದಕ್ಕೆ ಬಡ್ಡಿಯನ್ನೂ ಕೊಡಬೇಕು. ನ್ಯಾಯಾಲಯಕ್ಕೆ ಅಲೆದಾಡಲು ಭರಿಸಿದ ಖರ್ಚನ್ನು ಭರಿಸಬೇಕು ಎಂದು ಮೇರಿಯ ಪರ ವಕೀಲರಾದ ಮಹೇಶ್ ಕಜೆ ವಾದಿಸಿದ್ದರು.







