ಪ್ರಚೋದನಾಕಾರಿ ಹೇಳಿಕೆ ಆರೋಪ: ಆರಗ ಜ್ಞಾನೇಂದ್ರ, ಸಿ.ಟಿ.ರವಿ ವಿರುದ್ಧ ದೂರು

ಮಂಡ್ಯ/ನಾಗಮಂಗಲ, ಎ.9: ಬೆಂಗಳೂರಿನ ಜೆ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ ಸಂಬಂಧ ಕೋಮುಗಲಭೆ ಪ್ರಚೋದನೆ ನೀಡುವ ಹೇಳಿಕೆ ಕೊಟ್ಟಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಮುಖಂಡರು ಕಾಂಗ್ರೆಸ್ ನಗರದ ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾನೂನು ಘಟಕದ ಅಧ್ಯಕ್ಷ ಎಂ.ಗುರುಪ್ರಸಾದ್ ದೂರು ನೀಡಿದ್ದು, ಪ್ರಕರಣ ಕುರಿತು ಆರಗ ಜ್ಞಾನೇಂದ್ರ ಮತ್ತು ಸಿ.ಟಿ.ರವಿ ಅವರ ಹೇಳಿಕೆಯು ಗುಂಪು-ಗುಂಪುಗಳ ಮಧ್ಯೆ, ಭಾಷೆ-ಭಾಷೆಗಳ ಮಧ್ಯೆ, ಧರ್ಮ-ಧರ್ಮಗಳ ಬಗ್ಗೆ ದ್ವೇಷ ಮೂಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರೇರಣೆ ನೀಡುವುದಾಗಿರುತ್ತದೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದ ಸಿ.ಡಿ.ಗಂಗಾಧರ್, ಉರ್ದು ಮಾತನಾಡದ್ದಕ್ಕೆ ಯುವಕ ಚಂದ್ರುವನ್ನು ಹತ್ಯೆ ಮಾಡಲಾಗಿದೆ ಎಂದು ಸಮಾಜದ ಶಾಂತಿ ಕದಡುವ ಹೇಳಿಕೆ ನೀಡಿರುವ ಆರಗ ಜ್ಞಾನೇಂದ್ರ ಅವರು ಸಚಿವ ಸ್ಥಾನಕ್ಕೆ ಅನರ್ಹರಾಗಿದ್ದು, ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಮಾಡಬೇಕೆಂದು ಒತ್ತಾಯಿಸಿದರು.





