ಕರ್ನಾಟಕದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಳ: ತಮಿಳುನಾಡಿನತ್ತ ಐಟಿ ಕಂಪೆನಿಗಳ ಚಿತ್ತ
The Print ವರದಿ

ಹೊಸದಿಲ್ಲಿ: ಕರ್ನಾಟಕದಲ್ಲಿ ಕೋಮು ಧ್ರುವೀಕರಣಕ್ಕೆ ಪ್ರಬಲ ಪ್ರಯತ್ನಗಳು ನಡೆಯುತ್ತಿರುವಂತೆಯೇ, ಬೆಂಗಳೂರಿನಲ್ಲಿರುವ ಹಲವು ಮಾಹಿತಿ ತಂತ್ರಜ್ಞಾನ ಕಂಪೆನಿಗಳು ತಮ್ಮ ನೆಲೆಯನ್ನು ಬದಲಿಸುವುದಕ್ಕಾಗಿ ತಮಿಳುನಾಡು ಸರಕಾರದೊಂದಿಗೆ ಸಂಪರ್ಕದಲ್ಲಿವೆ ಎಂಬುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ. ರೇವತಿ ಕೃಷ್ಣನ್ ಅವರು ಈ ಬಗ್ಗೆ ಸುದೀರ್ಘ ವರದಿಯನ್ನು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಐಟಿ ಕಂಪೆನಿಗಳು ತಮಿಳುನಾಡು ಸರಕಾರದೊಂದಿಗೆ ಸಂಪರ್ಕದಲ್ಲಿದ್ದು, ನೆಲೆ ವರ್ಗಾವಣೆ ಸಾಧ್ಯತೆ ಬಗ್ಗೆ ವಿಚಾರಿಸುತ್ತಿವೆ ಎಂದು ತಮಿಳುನಾಡು ಸರಕಾರದ ಮೂಲಗಳು ‘ದಿ
ಪ್ರಿಂಟ್’ಗೆ ಹೇಳಿವೆ. ಆದರೆ, ತಮ್ಮ ನೆಲೆಯನ್ನು ಕರ್ನಾಟಕದಿಂದ ತಮಿಳುನಾಡಿಗೆ ಬದಲಿಸಲು ಆ ಕಂಪೆನಿಗಳು ಯಾವುದೇ ಕಾರಣವನ್ನು ನೀಡಿಲ್ಲ.
ಮಾಹಿತಿ ತಂತ್ರಜ್ಞಾನ ಕಂಪೆನಿಗಳು ನಮ್ಮ ರಾಜ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ ಹಾಗೂ ಅವುಗಳ ಪೈಕಿ ಹೆಚ್ಚಿನವು ತಮಿಳುನಾಡಿನಲ್ಲಿ ಕಂಪೆನಿ ಸ್ಥಾಪಿಸಲು ಬಯಸಿವೆ ಎಂಬುದಾಗಿ ‘ದಿ ಪ್ರಿಂಟ್’ಗೆ ನೀಡಿದ ಸಂದರ್ಶನವೊಂದರಲ್ಲಿ ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಹೇಳಿದ್ದಾರೆ. ಆದರೆ, ಈ ಕಂಪೆನಿಗಳು ಕರ್ನಾಟಕದಿಂದ ಬರುತ್ತಿವೆಯೇ ಅಥವಾ ಬೇರೆಡೆಯಿಂದ ಬರುತ್ತಿವೆಯೇ ಎನ್ನುವುದನ್ನು ತಿಳಿಸಲು ಅವರು ನಿರಾಕರಿಸಿದರು.
‘‘ನಮ್ಮ ರಾಜ್ಯದ ಬಗ್ಗೆ ಅಗಾಧ ಆಸಕ್ತಿಯನ್ನು ಕಂಪೆನಿಗಳು ವ್ಯಕ್ತಪಡಿಸುತ್ತಿವೆ. ಹಲವು ಮಂದಿ ಈ ವಿಷಯವನ್ನು ನಮ್ಮಲ್ಲಿ ಪ್ರಸ್ತಾಪಿಸಿದ್ದಾರೆ. ನಮ್ಮ ಸರಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ’’ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾಗಲು ಮತ್ತು ತನ್ನ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ನ ಕಚೇರಿಯೊಂದನ್ನು ಉದ್ಘಾಟಿಸಲು ತಮಿಳುನಾಡು ಹಣಕಾಸು ಸಚಿವರು ದಿಲ್ಲಿಗೆ ಆಗಮಿಸಿದ್ದರು.
ಸಿಂಗಾಪುರ, ಅಮೆರಿಕ ಮತ್ತು ಬ್ರಿಟನ್ ಮುಂತಾದ ಹಲವು ದೇಶಗಳಲ್ಲಿ ತಮಿಳುನಾಡು ಸರಕಾರವು ಶೀಘ್ರದಲ್ಲೇ ಹೂಡಿಕೆದಾರರ ಸಮಾವೇಶಗಳನ್ನು ಆಯೋಜಿಸಲಿದೆ ಎಂದು ಪಳನಿವೇಲ್ ತ್ಯಾಗರಾಜನ್ ಹೇಳಿದರು.
ನೆರೆಯ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಮ್ಮ ರಾಜ್ಯ ಗಮನಿಸುತ್ತಿದೆ ಎಂದು ಹೇಳಿದ ಅವರು, ‘‘ಪ್ರತಿಯೊಂದು ಬೆದರಿಕೆಯನ್ನೂ ಗಂಭೀರವಾಗಿ ಪರಿಗಣಿಸಲಾಗುವುದು’’ ಎಂದರು.
ಕರ್ನಾಟಕದಲ್ಲಿ ಕೋಮು ಧ್ರುವೀಕರಣವನ್ನು ಸಾಧಿಸುವ ನಿಟ್ಟಿನಲ್ಲಿ ಒಂದರ ನಂತರ ಇನ್ನೊಂದರಂತೆ ಪ್ರಯತ್ನಗಳು ನಡೆಯುತ್ತಿರುವಂತೆಯೇ, ಮಾಹಿತಿ ತಂತ್ರಜ್ಞಾನ ಕಂಪೆನಿಗಳು ತಮ್ಮ ನೆಲೆಯನ್ನು ರಾಜ್ಯದಿಂದ ವರ್ಗಾಯಿಸಲು ಬಯಸಿವೆ ಎಂಬ ವರದಿಗಳು ಬರುತ್ತಿವೆ. ಹಿಜಾಬ್ ವಿವಾದ, ಹಲಾಲ್ ಮಾಂಸ ವಿವಾದ, ರಾಜ್ಯದ ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ, ಕ್ರೈಸ್ತರ ಮೇಲೆ ದಾಳಿ, ಭಿನ್ನ ಧರ್ಮಗಳ ಜೋಡಿಗಳ ಮೇಲೆ ಹಿಂದುತ್ವ ಗುಂಪುಗಳು ನಡೆಸುತ್ತಿರುವ ದಾಳಿಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸುದ್ದಿಯಲ್ಲಿದೆ.
ರಾಜ್ಯದಲ್ಲಿನ ‘ಧರ್ಮ ಆಧಾರಿತ ಬಹಿಷ್ಕಾರ’ ಮತ್ತು ‘ಹೆಚ್ಚುತ್ತಿರುವ ಕೋಮು ವಿಭಜನೆ’ಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಯೋಕಾನ್ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಸುಮಾರು ಒಂದು ವಾರದ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಒತ್ತಾಯಿಸಿದ್ದರು. ಐಟಿಬಿಟಿಯ ಜಾಗತಿಕ ಕೇಂದ್ರ ಎಂಬ ಕರ್ನಾಟಕದ ಹೆಗ್ಗಳಿಕೆಯು ಅಪಾಯದಲ್ಲಿದೆ ಎಂಬುದಾಗಿಯೂ ಅವರು ಹೇಳಿದ್ದರು.
ಆದರೆ, ಮಜುಂದಾರ್ ಶಾರ ಮಾತುಗಳು ಆಡಳಿತಾರೂಢ ಬಿಜೆಪಿಗೆ ಪಥ್ಯವಾಗಲಿಲ್ಲ. ‘‘ಕಿರಣ್ ಶಾ ಮುಂತಾದ ಜನರು ತಮ್ಮ ವೈಯಕ್ತಿಕ, ರಾಜಕೀಯ ಪ್ರೇರಿತ ಅಭಿಪ್ರಾಯವನ್ನು ಐಟಿಬಿಟಿ ಕ್ಷೇತ್ರದಲ್ಲಿ ಭಾರತ ಹೊಂದಿರುವ ನಾಯಕತ್ವದೊಂದಿಗೆ ಸಮೀಕರಿಸುತ್ತಿರುವುದು ದುರದೃಷ್ಟಕರ’’ ಎಂಬುದಾಗಿ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು.
ಭಾರತದ ‘‘ಮಾಹಿತಿ ತಂತ್ರಜ್ಞಾನ ಕೇಂದ್ರ’’ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕರ್ನಾಟಕವು ತಂತ್ರಜ್ಞಾನ ಕಂಪೆನಿಗಳ ಸಂಖ್ಯೆಯಲ್ಲಿ ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಅದೂ ಅಲ್ಲದೆ ಕರ್ನಾಟಕದಲ್ಲಿ ಅಟೊಮೊಬೈಲ್, ಜವಳಿ ಮತ್ತು ದಿರಿಸು, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ, ವೈಮಾನಿಕ ಮತ್ತು ಇಂಜಿನಿಯರಿಂಗ್ ಮುಂತಾದ ಹಲವು ಬೃಹತ್ ಉದ್ದಿಮೆಗಳಿವೆ.
ತಮಿಳುನಾಡಿನಲ್ಲೂ ಬೃಹತ್ ಅಟೊಮೊಬೈಲ್ಸ್, ರಾಸಾಯನಿಕ ಮತ್ತು ಪೆಟ್ರೊಕೆಮಿಕಲ್ಸ್, ಕಬ್ಬಿಣ ಮತ್ತು ಉಕ್ಕು, ಬೃಹತ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ ಹಾರ್ಡ್‌ವೇರ್, ಕೃಷಿ ಮತ್ತು ಆಹಾರ ಸಂಸ್ಕರಣೆ, ಹಣಕಾಸು ತಂತ್ರಜ್ಞಾನ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಜವಳಿ, ಗಾಜು ಮತ್ತು ಸಿರಾಮಿಕ್ಸ್, ಇಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿ ಉತ್ಪಾದನೆ ಹಾಗೂ ಜವಳಿ ಮತ್ತು ಬಟ್ಟೆ ಉದ್ದಿಮೆಗಳಿವೆ.







