ಸುರತ್ಕಲ್: ಎನ್ಐಟಿಕೆ ಬೀಚ್ ನಲ್ಲಿ ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರಪಾಲು

ಸುರತ್ಕಲ್: ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರಪಾಲಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಐಟಿಕೆ ಬೀಚ್ ನಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಮಂಗಳೂರು ಶಕ್ತಿ ನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಎಂದು ಗುರುತಿಸಲಾಗಿದೆ. ಮೃತ ವೈಷ್ಣವಿ ಅವರ ತಂದೆ ವೆಂಕಟೇಶ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನಿಧನರಾದ ವೆಂಕಟೇಶ್ ಅವರ ಮಾವನ ತಿಥಿಯ ಪಿಂಡ ಪ್ರಧಾನ ಮಾಡಲೆಂದು ಕುಟುಂಬಿಕರು ಎನ್ ಐಟಿಕೆ ಸಮುದ್ರ ಕಿನಾರೆಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಪಿಂಡ ಪ್ರಧಾನ ಮಾಡಿದ ಬಳಿಕ ವೆಂಕಟೇಶ್ ಅವರು ನನ್ನ ಮಗಳು ವೈಷ್ಣವಿ ಹಾಗೂ ತಮ್ಮನ ಮಗಳು ತ್ರಿಶಾ ಳೊಂದಿಗೆ ಸಮುದ್ರಕ್ಕಿಳಿದು ಆಟವಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ದೊಡ್ಡ ಅಲೆಯೊಂದರ ಹೊಡೆತಕ್ಕೆ ಸಿಲುಕಿ ವೆಂಕಟೇಶ್, ತ್ರಿಶಾ ಹಾಗೂ ವೈಷ್ಣವಿ ಸಮುದ್ರಪಾಲಾದರು ಎಂದು ತಿಳಿದು ಬಂದಿದೆ.
ಈ ವೇಳೆ ಸ್ಥಳದಲ್ಲಿದ್ದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅಲ್ಲೇ ಸಮೀಪದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಮ್ ಗಾರ್ಡ್ ಪ್ರಶಾಂತ್ ಮತ್ತು ಮತ್ತೋರ್ವ ಸ್ಥಳೀಯ ಯುವಕ ಸಮುದ್ರ ಪಾಲಾದವರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಬಳಿಕ ಮಾಹಿತಿ ಸಿಕ್ಕಿ ಸ್ಥಳಕ್ಕೆ ಧಾವಿಸಿದ್ದ ಸುರತ್ಕಲ್ ಠಾಣೆಯ ಹೊಯ್ಸಳ ವಾಹನದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದಾರಿಮಧ್ಯೆ ತ್ರಿಶಾ ಹಾಗೂ ವೈಷ್ಣವಿ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವೈಷ್ಣವಿ ನಗರದ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ತ್ರಿಶಾ ಬೆಂಗಳೂರಿನ ಗುರುಕುಲ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







