ಸಹೋದರಿಯ ನಿಧನ: ಐಪಿಎಲ್ ಬಯೋ ಬಬಲ್ ತೊರೆದ ಆರ್ ಸಿಬಿ ವೇಗಿ ಹರ್ಷಲ್ ಪಟೇಲ್

ಮುಂಬೈ: ತನ್ನ ಸಹೋದರಿಯ ಸಾವಿನ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಅವರು ತಮ್ಮ ಮನೆಗೆ ತೆರಳುವ ಉದ್ದೇಶದಿಂದ ಐಪಿಎಲ್ ಬಯೋ ಬಬಲ್ ತೊರೆದಿದ್ದಾರೆ.
ಶನಿವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಏಳು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದ ನಂತರ ಹರ್ಷಲ್ ಈ ದುರಂತ ಸುದ್ದಿಯನ್ನು ಸ್ವೀಕರಿಸಿದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ಕುಟುಂಬದಲ್ಲಿ ಸಂಭವಿಸಿದ ದುರಂತದ ಬಗ್ಗೆ ತಿಳಿದ ನಂತರ ಹರ್ಷಲ್ ಬಯೋ ಬಬಲ್ ನಿಂದ ನಿರ್ಗಮಿಸಿದರು. ಹರ್ಷಲ್ ಕಳೆದೆರಡು ಋತುಗಳಲ್ಲಿ ಆರ್ ಸಿಬಿ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ ಹಾಗೂ ಶನಿವಾರ ಮುಂಬೈ ವಿರುದ್ಧ ಆರ್ ಸಿಬಿ ತಂಡವು ಏಳು ವಿಕೆಟ್‌ಗಳ ಗೆದ್ದಿರುವ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದರು.
ದುರದೃಷ್ಟವಶಾತ್, ಹರ್ಷಲ್ ಅವರ ಕುಟುಂಬದಲ್ಲಿ ಸಾವು ಸಂಭವಿಸಿದ ಕಾರಣ ಅವರು ಬಯೋ-ಬಬಲ್ ಅನ್ನು ಬಿಡಬೇಕಾಯಿತು. ಮೃತಪಟ್ಟವರು ಪಟೇಲ್ ಅವರ ಸಹೋದರಿ. ಅವರು ಪುಣೆಯಿಂದ ಮುಂಬೈಗೆ ತೆರಳಲು ತಂಡದ ಬಸ್ ಬಳಸಿಕೊಳ್ಳಲಿಲ್ಲ. ಎಪ್ರಿಲ್ 12 ರಂದು ಸಿಎಸ್ ಕೆ ವಿರುದ್ಧದ ಮುಂದಿನ ಪಂದ್ಯದ ಮೊದಲು ಅವರು ಬಯೋ ಬಬಲ್ ಅನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.
31 ವರ್ಷದ ಪಟೇಲ್ ಅವರು ಕಳೆದ ವರ್ಷ ಐಪಿಎಲ್ ಗೆ ಪಾದಾರ್ಪಣೆ ಮಾಡಿದ ನಂತರ ಎಂಟು ಟಿ- 20 ಗಳನ್ನು ಆಡಿದ್ದಾರೆ. ಆರ್‌ಸಿಬಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.