ಬಿಜೆಪಿ ನಾಯಕರು, ಮಂತ್ರಿಗಳಿಂದಲೇ ಶಾಂತಿಗೆ ಭಂಗ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬೆಳಗಾವಿ, ಎ. 10: ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಮಂತ್ರಿಗಳು, ಬಿಜೆಪಿ ನಾಯಕರಿಂದಲೇ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ವಿರುದ್ಧ ಬಿಜೆಪಿ, ಮಂತ್ರಿಗಳು, ಸಂಘಪರಿವಾರದ ಸದಸ್ಯರು ಷಡ್ಯಂತ್ರ ಮಾಡುವುದನ್ನ ನೋಡುತ್ತಿದ್ದೇವೆ. ಇದನ್ನು ಸರಕಾರ ನಿಯಂತ್ರಿಸಬೇಕು ಎಂದು ಒತ್ತಾಯ ಮಾಡಿದರು.
ಅಲ್ಲದೆ, ಧಾರವಾಡದ ದೇವಸ್ಥಾನದ ಎದುರು ಕಲ್ಲಂಗಡಿ ವ್ಯಾಪಾರಿ ನಬಿಸಾಬ್ ಅವರನ್ನು ಗುರಿಯಾಗಿಸಿಕೊಂಡು ಶ್ರೀರಾಮ ಸೇನೆಯ ರಣಹೇಡಿಗಳು ಬಲವಂತದಿಂದ ಕಲ್ಲಂಗಡಿ ಹಣ್ಣನ್ನು ರಸ್ತೆಗೆ ಎಸೆದಿದ್ದಾರೆ. ಇನ್ನೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾನವೀಯತೆ ಇದ್ದರೆ ಶ್ರೀರಾಮ ಸೇನೆ ಗೂಂಡಾಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಸ್ವಾತಂತ್ರ್ಯ ಹೋರಾಟಗಾರರ ಉದ್ದೇಶ ಶಾಂತಿ, ಸಹಬಾಳ್ವೆಯಿಂದ, ಸಹೋದರತೆಯಿಂದ ಬದುಕಬೇಕೆಂಬ ಆಶಯವಿತ್ತು. ಅವರ ಆಶಯಗಳಿಗೆ ವಿರುದ್ಧವಗಿ ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೆಯುತ್ತಿದೆ ಎಂದರು.
ಮೊಟ್ಟಮೊದಲಿನ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದು ಬಹದೂರ್ ಎಸ್.ಝಾಫರ್.ಇದನ್ನು ಯಾರೂ ಸಹ ಮರೆಯಲು ಆಗುವುದಿಲ್ಲ. ತದನಂತರ 1857ರಲ್ಲಿ ಝಾನ್ಸಿ ರಾಣಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟ ಮಾಡಿದರು ಎಂದ ಅವರು, ಯಾವುದೇ ನಿರೀಕ್ಷೆ ಇಲ್ಲದೇ ಈ ಭಾರತ ದೇಶವನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ಭಾರತ ದೇಶ ಉಳಿಸುವ ಕೆಲಸ ನಾವೆಲ್ಲ ಮಾಡಬೇಕಿದೆ ಎಂದು ಕರೆ ನೀಡಿದರು.
ಧಾರವಾಡ, ರಾಯಚೂರು, ಕೋಲಾರದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ ಬಹುದೊಡ್ಡ ಷಡ್ಯಂತ್ರ. ಮೊದಲು ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ, ಬಳಿಕ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಮೂಲಕ ಮೀಸಲಾತಿ ರದ್ದು ಮಾಡಿ ಅವಕಾಶ ತಪ್ಪಿಸುವಂತಹ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ವಿನಯ್ ನಾವಲಗಟ್ಟಿ ಸೇರಿದಂತೆ ಪ್ರಮುಖರಿದ್ದರು.







