ಮೂಲ್ಕಿ ಜಯಾನಂದ ದೇವಾಡಿಗರ ಬಹುಕು-ಬರಹಗಳ ಕುರಿತ 'ಶ್ರಮಯೇವ ಜಯತೇ' ಕೃತಿಬಿಡುಗಡೆ

ಮಂಗಳೂರು, ಎ.10: ಮೂಲ್ಕಿ ಜಯಾನಂದ ದೇವಾಡಿಗರ ಬಹುಕು-ಬರಹಗಳ ಕುರಿತ 'ಶ್ರಮಯೇವ ಜಯತೇ' ಕೃತಿ ಬಿಡುಗಡೆಯು ರವಿವಾರ ನಗರದ ಗಾಂಧಿನಗರ ದೇವಾಡಿಗರ ಸಮಾಜ ಭವನದಲ್ಲಿ ನಡೆಯಿತು.
ಪತ್ರಕರ್ತ ಯು.ಕೆ.ಕುಮಾರನಾಥ್ ಮತ್ತು ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ಉದ್ಯಮಿ ರವಿ ಎಸ್. ದೇವಾಡಿಗ ಜಂಟಿಯಾಗಿ ಕೃತಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಕುಮಾರನಾಥ್, ಶಿಸ್ತು ಮತ್ತು ಸಮಯ ಪಾಲನೆಯನ್ನು ಆ ದಿನಗಳಲ್ಲೇ ಜಯಾನಂದರು ಅಳವಡಿಸಿಕೊಂಡಿದ್ದರು. ಇದೊಂದು ಮಾದರಿ ಆಕರ ಗ್ರಂಥವಾಗಿದ್ದು, ಸಂಶೋಧನಾ ವಿದ್ಯಾರ್ಥಿಗಳಿಗೆ ಪೂರಕವಾಗಿದೆ ಎಂದರು.
ರವಿ ದೇವಾಡಿಗ ಮಾತನಾಡಿ, ಸಮುದಾಯದ ಭೀಷ್ಮಾಚಾರ್ಯರಾಗಿರುವ ದೇವಾಡಿಗರ ಬದಕಿನ ಚಿತ್ರಣವನ್ನು ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.
ಕೃತಿಯನ್ನು ಪರಿಚಯಿಸಿ ಮಾತನಾಡಿದ ಗಣಪತಿ ಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಪ್ರಸಕ್ತ ದಿನಗಳಲ್ಲಿ ಎಲ್ಲರ ಅನುಭವಗಳೂ ದಾಖಲಾಗಬೇಕಾದ ಅಗತ್ಯವಿದೆ. ಭವಿಷ್ಯದಲ್ಲಿ ಅದು ಇನ್ನೊಬ್ಬರಿಗೆ ಪ್ರೇರಣೆ, ಮಾರ್ಗದರ್ಶನವಾಗಬಹುದು. ಸಾಹಿತ್ಯಿಕವಾಗಿ ಆತ್ಮಚರಿತ್ರೆಯಾದರೂ, ಡೈರಿ ಬರೆದ ರೀತಿಯಲ್ಲಿ, ದಿನಾಂಕ, ಅಂಕಿ ಅಂಶಗಳು, ಸಹಿ ಎಲ್ಲವೂ ಒಳಗೊಂಡ ದಸ್ತಾವೇಜು ಬರಹದ ರೀತಿಯಲ್ಲಿ ಇದೆ. ಸಮುದಾಯದ ಏಳಿಗೆಯ ಜತೆಗೆ ಇತರ ಹಿಂದುಳಿದ ಸಮುದಾಯಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಜಯಾನಂದ ಪಾತ್ರವನ್ನು ಪುಸ್ತಕದಲ್ಲಿ ಕಾಣಬಹುದಾಗಿದೆ ಎಂದರು.
ವಿವಾಹದ 63ನೇ ವಸಂತಕ್ಕೆ ಕಾಲಿರಿಸಿದ ಜಯಾನಂದ ದೇವಾಡಿಗ ಮತ್ತು ಸರೋಜಿನಿ ಜೆ. ದೇವಾಡಿಗ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡರು.
ಈ ಸಂದರ್ಭ ಮಾತನಾಡಿದ ಜಯಾನಂದ ದೇವಾಡಿಗ ಹಿಂದುಳಿದ ಸಮಾಜ ಇತಿಹಾಸವನ್ನು ದಾಖಲೀಕರಿಸುವುದರಲ್ಲಿ ಹಿಂದೆ ಬಿದ್ದಿದೆ. ಶ್ರಮಯೇವ ಜಯತೇ ಕೃತಿಯಲ್ಲಿ ಹಿಂದುಳಿದ ವರ್ಗದ ಸಂಘಟನೆಯನ್ನು ಕಟ್ಟಿದ ರೀತಿ, ದೇವಾಡಿಗ ಸಮಾಜದ ಬಲವರ್ಧನೆ ಬಗ್ಗೆ ಉಲ್ಲೇಖಿಸಿರುವೆ. ಈ ಕಾರ್ಯಕ್ರಮ ಹಾಗೂ ಗೌರವ ನಿಜಕ್ಕೂ ನನಗೂ ತುಂಬ ಖುಷಿ ನೀಡಿದೆ ಎಂದರು.
ದ.ಕ. ಮತ್ತು ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನ ಆಡಳಿ ಮೊಕ್ತೇಸರ ಕೆ.ಚಂದ್ರಶೇಖರ ನಾಯ್ಕಾ, ದ.ಕ. ಜಿಲ್ಲಾ ಅನುದಾನಿತ ಶಾಲೆಗಳ ಆಡಳಿತ ಸಂಘದ ಅಧ್ಯಕ್ಷ ಪಿ.ಗೋಪಾಲಕೃಷ್ಣ ಭಟ್, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ಬಿ.ವಿಶ್ವನಾಥ ಸಾಲಿಯಾನ್, ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ಕೆ.ಶ್ರೀಧರ್, ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಮುಂಬೈನ ದೇವಾಡಿಗ ಅಕ್ಷಯ ಕಿರಣ್ ಸೇವಾ ಫೌಂಡೇಶನ್ ಸೇವಾದಾರ ಬ್ರಹ್ಮಾವರ ಗಣೇಶ್ ಸೇರಿಗಾರ ಉಪಸ್ಥಿತರಿದ್ದರು.
ಡಿ.ಜೆ. ಸುಚೇತನ್ ಸ್ವಾಗತಿಸಿದರು.ದಿನೇಶ್ ಎಲ್. ಬಂಗೇರಾ ವಂದಿಸಿದರು.ಸುರೇಖಾ ಕಾರ್ಯಕ್ರಮ ನಿರೂಪಿಸಿದರು.