ನಿಮ್ಮಂತಹ ಮುಖ್ಯಮಂತ್ರಿಗಳು ಅವಶ್ಯಕತೆ ರಾಜ್ಯಕ್ಕಿಲ್ಲ: ಸಿಪಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಎ. 10: ‘ಧಾರವಾಡ ಜಿಲ್ಲೆಯ ನುಗ್ಗಿಕೇರಿಯಲ್ಲಿ ಎರಡು ದಶಕಗಳಿಂದ ಹಣ್ಣು ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿರುವುದಲ್ಲದೇ ಅವರು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆ ಹಾಕಿ ನಾಶ ಪಡಿಸಿದ ಶ್ರೀರಾಮಸೇನೆಯ ಗೂಂಡಾಗಳ ದಾಳಿಯನ್ನು ಸಿಪಿಎಂ ತೀವ್ರವಾಗಿ ಖಂಡಿಸಿದೆ.
ರಾಜ್ಯ ಸರಕಾರ ಕೂಡಲೇ ಈ ಗೂಂಡಾದಾಳಿಯಲ್ಲಿ ತೊಡಗಿದವರನ್ನು ಮತ್ತು ಅವರಿಗೆ ನಿರ್ದೇಶನ ನೀಡಿದ ನಾಯಕರನ್ನು ಬಂಧಿಸಿ, ಅವರ ಮೇಲೆ ಗೂಂಡಾ ಕಾಯ್ದೆಯಡಿ ಮೊಕದ್ದಮೆಗಳನ್ನು ದಾಖಲಿಸಿ ಅಗತ್ಯ ಕಾನೂನಿನ ಕ್ರಮವಹಿಸಬೇಕುಮತ್ತು ನಷ್ಟಕ್ಕೊಳಗಾದ ಮುಸ್ಲಿಮ್ ವ್ಯಾಪಾರಿಗಳಿಗೆ ನಷ್ಟ ಪರಿಹಾರವನ್ನು ಒದಗಿಸಲು ಕ್ರಮವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಿಪಿಎಂ ಆಗ್ರಹಿಸಿದೆ.
ರಾಜ್ಯದಲ್ಲಿನ ಎಲ್ಲ ಅಲ್ಪಸಂಖ್ಯಾತ ಹಾಗೂ ಮುಸ್ಲಿಮ್ ವ್ಯಾಪಾರಿಗಳಿಗೆ ಇಂತಹ ಗೂಂಡಾಗಳಿಂದ ರಕ್ಷಣೆ ಒದಗಿಸಬೇಕು. ಇಂತಹ ಘಟನೆಗಳು ರಾಜ್ಯದ ಸೌಹಾದರ್ತೆಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲ, ಎಲ್ಲ ಜನತೆಯ ಮೇಲೆ ದಾಳಿ ನಡೆಸಿ ಹಫ್ತಾ ವಸೂಲಿ ಮಾಡುವಂತಹ ಮಾಫಿಯಾ ಶಕ್ತಿಗಳಿಗೆ ಜನ್ಮ ನೀಡಲಿವೆ. ಇದರಿಂದ ಕೇವಲ ಮುಸ್ಲಿಮ್ ವ್ಯಾಪಾರಿಗಳು ಮಾತ್ರವಲ್ಲ ಎಲ್ಲ ಧರ್ಮೀಯರು ಸಂಕಷ್ಟಕ್ಕೆ ಈಡಾಗುತ್ತಾರೆ ಎಂಬುದು ಅವಶ್ಯವಾಗಿ ಗಮನಿಸಬೇಕೆಂದು ಸಿಪಿಎಂ ಎಚ್ಚರಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂತಹ ಗೂಂಡಾ ಮಾಫಿಯಾ, ಮತಾಂಧ ಶಕ್ತಿಗಳನ್ನು ನಿಗ್ರಹಿಸಲು ಮಧ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಬೇಕು. ಇಲ್ಲವಾದರೆ ನಿಮ್ಮಂತಹ ಸಿಎಂ ಅವಶ್ಯಕತೆ ರಾಜ್ಯಕ್ಕಿಲ್ಲ. ಆದುದರಿಂದ ತಾವು ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







