ಮಂಗಳೂರು:ವಿಶ್ವ ಹೋಮೀಯೊಪತಿ ದಿನಾಚರಣೆ

ಮಂಗಳೂರು, ಎ.10: ಭಾರತೀಯ ಹೋಮೀಯೊಪತಿ ವೈದ್ಯರ ಸಂಘ ಕರ್ನಾಟಕ (ಐಎಚ್‌ಎಂಎ) ಹಾಗೂ ಮಂಗಳೂರು ಘಟಕದ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆರ್.ಎ.ಪಿ.ಸಿ.ಸಿ ಕಾನ್ಪರೆನ್ಸ್ ಹಾಲ್ ನಲ್ಲಿ ರವಿವಾರ ವಿಶ್ವ ಹೋಮೀಯೊಪತಿ ದಿನ ಆಚರಿಸಲಾಯಿತು. ಈ ಸಂದರ್ಭ ಹೋಮೀಯೊಪತಿ ವೈದ್ಯರ ವಿಚಾರ ಸಂಕಿರಣವೂ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ವಿಶ್ವದಲ್ಲಿ ಎರಡನೇ ಅತೀ ಹೆಚ್ಚು ಬಳಕೆಯಾಗುವ ಔಷಧೀಯ ಪದ್ದತಿ ಎಂಬ ಪ್ರಖ್ಯಾತಿಗೆ ಹೋಮಿಯೋಪತಿ ಕ್ಷೇತ್ರಕ್ಕೆ ದಕ್ಕಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ದಾಖಲಾಗುತ್ತಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ಈ ಹಿಂದೆ 2 ಹೋಮಿಯೋಪತಿ ವೈದ್ಯರ ಹುದ್ದೆಗೆ ಅವಕಾಶವಿತ್ತು. ಈಗ ಹೊಸದಾಗಿ 7 ಹುದ್ದೆಗಳನ್ನು ಸರಕಾರ ಸೃಷ್ಟಿಸಿದೆ. ಈ ಮೂಲಕ ಜಿಲ್ಲೆಯಲ್ಲಿ 9 ಹೋಮಿಯೋಪತಿ ಹುದ್ದೆಗಳು ಸೃಷ್ಟಿಯಾಗಿದೆ. ಆಯುಷ್ ಆಸ್ಪತ್ರೆಯಲ್ಲಿ ಅಲೋಪತಿ ವೈದ್ಯ ಪದ್ದತಿ ಬಿಟ್ಟು ಉಳಿದ ಎಲ್ಲ ವೈದ್ಯ ಪದ್ದತಿಯಲ್ಲಿ ಸೇವೆ ರೋಗಿಗಳಿಗೆ ಸಿಗುತ್ತಿದೆ. ಅತೀ ಶೀಘ್ರದಲ್ಲಿಯೇ ಮಂಗಳೂರಿಗೆ ಆಯುಷ್ ಸ್ಪೋಟ್ಸ್ ಮೆಡಿಸಿನ್ ಸೆಂಟರ್ ಆರಂಭಗೊಳ್ಳಲಿದೆ ಎಂದು ಡಾ.ಮುಹಮ್ಮದ್ ಇಕ್ಬಾಲ್ ಹೇಳಿದರು.
ಹೋಮಿಯೋಪತಿ ವೈದ್ಯ ಪದ್ದತಿ ಮೂಲಕ ಸೃಷ್ಟಿ ಎನ್ನುವ ಯೋಜನೆಯಿಂದ ಜಿಲ್ಲೆಯಲ್ಲಿ ಮಕ್ಕಳಾಗದ 47 ವಿವಾಹಿತೆಯರ ಪೈಕಿ ಇಬ್ಬರು ಗರ್ಭಿಣಿಯಾಗಿದ್ದಾರೆ. ಉಳಿದವರ ಚಿಕಿತ್ಸೆ ಕಾರ್ಯ ಮುಂದುವರಿದಿದೆ. ಮಾನಸ ಮಿತ್ರ ಯೋಜನೆಯ ಮೂಲಕ ಆಟಿಸಂ ಇರುವ ಮಕ್ಕಳ ಚಿಕಿತ್ಸೆಯನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಐಎಚ್‌ಎಂಎ ಸಿದ್ಧಪಡಿಸಿದ ಕಾರಿನ ಸ್ಟಿಕ್ಕರ್‌ನ್ನು ಡಾ.ಮುಹಮ್ಮದ್ ಇಕ್ಬಾಲ್ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಐಎಚ್‌ಎಂಎ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಗ್ರೇಟ್ಟಾ ಲೋಬೋ ದೇಶದಲ್ಲಿ ಈಗ 20 ಲಕ್ಷ ಹೋಮಿಯೋಪತಿ ವೈದ್ಯರಿದ್ದಾರೆ. ಪ್ರತಿ ವರ್ಷ 40 ಸಾವಿರ ವೈದ್ಯರು ಈ ಕ್ಷೇತ್ರದಿಂದ ಹೊರಬರುತ್ತಿದ್ದಾರೆ. 40 ವರ್ಷದ ಹಿಂದೆ ಜಿಲ್ಲೆಯಲ್ಲಿ 2 ಹೋಮಿಯೋಪತಿ ವೈದ್ಯರು ಇರುವ ಜಾಗದಲ್ಲಿ ಈಗ 100ಕ್ಕೂ ಅಧಿಕ ವೈದ್ಯರಿದ್ದಾರೆ. ಜಿಲ್ಲೆಯಲ್ಲಿ ಮೂರು ಹೋಮಿಯೋಪತಿ ಮೆಡಿಕಲ್ ಕಾಲೇಜುಗಳಿವೆ. ಹೋಮಿಯೋಪತಿ ಕ್ಷೇತ್ರ ಸಾಕಷ್ಟು ಪ್ರಗತಿ ಕಾಣುತ್ತಿದೆ. ಜರ್ಮನಿಯಲ್ಲಿ ಆರಂಭವಾದ ಈ ವೈದ್ಯಕೀಯ ಪದ್ದತಿ ಈಗ ವಿಶ್ವದ ಎಲ್ಲ ಪ್ರಮುಖ ರಾಷ್ಟ್ರಗಳಲ್ಲಿ ಸೇವೆಗೆ ಲಭ್ಯವಾಗಿದೆ ಎಂದರು.
ಐಎಚ್‌ಎಂಎ ರಾಷ್ಟ್ರೀಯ ಸಂಘಟನೆ ಉಪಾಧ್ಯಕ್ಷ ಡಾ.ಪ್ರವೀಣ್ ರಾಜ್ ಉಪಸ್ಥಿತರಿದ್ದರು.
ಹೋಮಿಯೋಪತಿ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸಾಧನೆಗೆ ಮಂಗಳೂರಿನ ವೈದ್ಯ ಹಾಗೂ ಹೋಮೀಯೊಪತಿ ಔಷಧ ತಯಾರಿಕಾ ಘಟಕ ಸೇಂಟ್ ಜಾರ್ಜ್ ಹೋಮಿಯೋಪತಿ ಸಂಸ್ಥೆಯ ರುವಾರಿ ಡಾ. ಅಬ್ರಹಾಂ ಜಾಕರಿಯಾಸ್ ಅವರನ್ನು ವೈದ್ಯರ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಹೋಮೀಯೊಪತಿ ತಜ್ಞ ವೈದ್ಯರುಗಳಾದ ಡಾ.ರಾಮಕೃಷ್ಣ ರಾವ್, ಡಾ. ಅನೀಶ್ ಕುಮಾರ್, ಡಾ.ದೀಪಕ್ ಆರ್.ಡಿ. ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.
ಐಎಚ್‌ಎಂಎ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್ ರೈ ಸ್ವಾಗತಿಸಿದರು. ಮಂಗಳೂರು ಘಟಕ ದ ಅಧ್ಯಕ್ಷ ಡಾ. ಅವಿನಾಶ್ ವಿ.ಎಸ್ ವಂದಿಸಿದರು. ಡಾ. ತ್ರಿವೇಣಿ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.