ಸಂಬಂಧಗಳು ಕದಡುವ ಕಾಲಘಟ್ಟಕ್ಕೆ ಪಂಪನ ಮಾತು ಮಾರ್ಗವಾಗಬೇಕು: ಡಾ.ವಸುಂಧರಾ ಭೂಪತಿ

ಬೆಂಗಳೂರು, ಎ. 10: ‘ಇತ್ತೀಚೆಗೆ ಮನುಷ್ಯ ಸಂಬಂಧಗಳು ಕದಡುತ್ತಿವೆ. ಇಂತಹ ಕಾಲಘಟ್ಟದಲ್ಲಿರುವ ನಮಗೆ ಪಂಪ ಮಹಾಕವಿಯ ‘ಮನುಜ ಕುಲಂ ತಾನೊಂದೇ ವಲಂ’ ಎನ್ನುವ ಮಾತು ಬದುಕಿನ ಮಾರ್ಗ ಆಗಬೇಕು’ ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಬೆನಕ ಬುಕ್ಸ್‍ಬ್ಯಾಂಕ್ ವತಿಯಿಂದ ಗಾಂಧಿಭವನದಲ್ಲಿ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕುಟುಂಬ ಮತ್ತು ಸಮಾಜ ವಿಘಟನೆಯಾಗುತ್ತಿರುವ ಕಾಲಕ್ಕೆ ಲೋಕಾರ್ಪಣೆಗೊಳ್ಳುತ್ತಿರುವ ಕೃತಿಗಳು ಆಪ್ತ ಸಮಾಲೋಚಕವಾಗಿ ಕಾರ್ಯನಿರ್ವಹಿಸುತ್ತವೆ. ಶೀರ್ಷಿಕೆಗಳು ಓದುಗರನ್ನು ಆಕರ್ಷಿಸುವಂತಿದೆ’ ಎಂದರು. ‘ಎರಡು ವರ್ಷಗಳಿಂದ ಜನರು ಕೊರೋನಾ ಕರಿ ನೆರಳಿನಲ್ಲಿ ಬದುಕುತ್ತಿದ್ದರು. ಕೊರೋನಾನಂತರದಲ್ಲಿಯೂ ಕಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದಾರೆ. ಅಂತವರಿಗೆ ಇದು ಹೆಚ್ಚು ಉಪಯೋಗಕಾರಿ’ ಎಂದು ಅವರು ಪ್ರಶಂಶಿಸಿದರು.
ಪತ್ರಕರ್ತ ರವೀಂದ್ರ ಭಟ್ಟ ಮತನಾಡಿ, ‘ಸುತ್ತಲಿನ ಜನ -ಪರಿಸರದ ವಿದ್ಯಮಾನಗಳ ಕುರಿತು ಮಾತನಾಡುವುದಕ್ಕಿಂತ ನಮ್ಮೊಳಗಿನ ‘ನಾನು’ ಜೊತೆ ಮಾತನಾಡುವ ಅಗತ್ಯವಿದೆ. ‘ನಮ್ಮೊಳಗಿನ ನಾನು’ ದರ್ಶನ ಮಾಡುವುದು ಎಂದರೆ ಅಧ್ಯಾತ್ಮಕದ ಕಡೆ ನೋಡುವುದಲ್ಲ. ನಮ್ಮ ನಡೆ-ನುಡಿಯನ್ನು ಅವಲೋಕಿಸುವುದು. ಅದಕ್ಕಾಗಿ ಸಮಯ ಹೊಂದಿಸಿಕೊಳ್ಳುವ ಅನಿವಾರ್ಯತೆ ಇದೆ. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ’ ಎಂದರು.
‘ಹಿಂದೆ ಕೂಡು ಕುಟುಂಬಗಳಿದ್ದಾಗ, ಅತ್ಯಂತ ಸಹನೆ, ಸಹಕಾರ, ಸಹಬಾಳ್ವೆಯನ್ನು ಕಲಿಸುತ್ತಿದ್ದವು. ವ್ಯಕ್ತಿಯ ಕೋಪ-ತಾಪ-ಅವಸರಗಳನ್ನು ನಿಯಂತ್ರಿಸುತ್ತಿದ್ದವು. ಹೀಗಾಗಿ, ಈ ವ್ಯವಸ್ಥೆಯು ಮಹತ್ವ ಪಡೆದುಕೊಂಡಿತ್ತು. ಆದರೆ, ಇಂದು ಇಂತಹ ಪಾಠವನ್ನು ಯಾರೂ ಹೇಳುವ ಸ್ಥಿತಿಯಲ್ಲಿ ನಮ್ಮ ಬದುಕಿಲ್ಲ. ಆದ್ದರಿಂದ, ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮ ಮನಸ್ಸಿನಿಂದ ನೋಡಿ, ತಿಳಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಲೇಖಕಿ ಡಾ. ಶಾಂತಾ ನಾಗರಾಜ್ ಮಾತನಾಡಿ, ‘ಇಂದಿನ ಬರಹಗಾರರು ಒತ್ತಡದ ಬದುಕನ್ನು ಎದುರಿಸಿ, ಪರಿಣಾಮಕಾರಿಯಾಗಿ ಬರೆಯುತ್ತಿದ್ದಾರೆ’ ಎಂದು ಪ್ರಶಂಸಿದರು. ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿ, ‘ಸ್ತ್ರೀವಾದವನ್ನು ಕೇಂದ್ರೀಕರಿಸಿ ಮಾನವೀಯತೆಯನ್ನು ವಿಜೃಂಭಿಸುವ ಬರಹಗಳನ್ನು ಲೋಕಾರ್ಪಣೆಯಾದ ನಾಲ್ಕು ಪುಸ್ತಕಗಳಲ್ಲಿ ಕಾಣಬಹುದಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಧಾ ಶರ್ಮಾ ಚವತ್ತಿ ಅವರ ‘ನಮ್ಮೊಳಗೆ ನಾವು’, ಮಾಲತಿ ಭಟ್ ಅವರ ‘ದೀಪದ ಮಲ್ಲಿಯರು’ ಶೋಭಾ ಹೆಗಡೆ ಅವರ ‘ಅವಲೆಂಭ ಸುಗಂಧ’ ಹಾಗೂ ಸಿ. ಚಿತ್ರ ಅವರ ‘ಅನಾಮಿಕಳ ಅಂತರಂಗ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್, ಪತ್ರಕರ್ತೆ ಶಾಂತಲಾ, ಯಶೋದಾ ನಾಗರಾಜ್, ಉಮಾದೇವಿ, ಕೃಷಿ ವಿಜ್ಞಾನಿ ಮಂಜುನಾಥ, ಹಿರಿಯ ಪತ್ರಕರ್ತ ನರಸಿಂಹ ಜೋಶಿ, ಪ್ರಕಾಶಕ ಗಣೇಶ, ಲೇಖಕಿ ಸುಧಾ ಶರ್ಮಾ ಚವತ್ತಿ, ಶೋಭಾ ಹೆಗಡೆ, ಸಿ. ಚಿತ್ರಾ ಹಾಗೂ ಮಾಲತಿ ಭಟ್ ಸೇರಿದಂತೆ ಇತರೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.







