ಬೆಳ್ಳಾರೆ ಪಾಲ್ತಾಡು ಗುಡ್ಡೆಯಲ್ಲಿ ವೃದ್ಧನ ಅಸ್ಥಿಪಂಜರ ಪತ್ತೆ; ಕೊಲೆ ಶಂಕೆ
ಮೃತ ವ್ಯಕ್ತಿಯ ಸಹೋದರ, ಸಹೋದರನ ಪುತ್ರ ಪೊಲೀಸ್ ವಶಕ್ಕೆ

ಕಡಬ ತಾಲೂಕಿನ ಪಾಲ್ತಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದ್ದು ಸಾವಿನ ಕುರಿತು ಅವರ ಪುತ್ರಿಯರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬೆಳ್ಳಾರೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಪಾಲ್ತಾಡು ಗ್ರಾಮದ ಬೊಳಿಯಾಲ ನಿವಾಸಿ ಸೇಷಪ್ಪ ಪೂಜಾರಿ (76) ಎಂಬವರು ಫೆ.5ರಿಂದ ನಾಪತ್ತೆಯಾಗಿದ್ದಾರೆಂದು ಪೊಲೀಸ್ ದೂರು ನೀಡಲಾಗಿತ್ತು. ಎ. 8 ರಂದು ಸೇಷಪ್ಪ ಪೂಜಾರಿಯವರ ಮೃತದೇಹ ಪಾಲ್ತಾಡು ಸಮೀಪದ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ಸರಕಾರಿ ಗುಡ್ಡದಲ್ಲಿ ಪತ್ತೆಯಾಗಿತ್ತು. ಸಾವಿನ ಕುರಿತು ಸಂಶಯವಿರುವುದಾಗಿ ಸೇಷಪ್ಪ ಪೂಜಾರಿಯವರ ಪುತ್ರಿ ಶುಭವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೇಷಪ್ಪ ಪೂಜಾರಿಯವರು ತನ್ನ ಸಹೋದರ ಬಾಲಕೃಷ್ಣ ಪೂಜಾರಿಯ ಮನೆಯಲ್ಲಿ ಮೂಳೆ ಮುರಿತಕ್ಕೊಳಗಾಗಿ ವಿಶ್ರಾಂತಿ ಚಿಕಿತ್ಸೆಯಲ್ಲಿದ್ದು, ಫೆ.5ರಿಂದ ನಾಪತ್ತೆಯಾಗಿದ್ದು, ಎ.8ರಂದು ಅಪರಾಹ್ನ 3:00 ಗಂಟೆಗೆ ಪಾಲ್ತಾಡಿ ಗ್ರಾಮದ ಬೊಳಿಯಾಲ ಎಂಬಲ್ಲಿ ಗೇರು ನಿಗಮಕ್ಕೆ ಸಂಬಂಧ ಪಟ್ಟ ಗುಡ್ಡ ಜಮೀನಲ್ಲಿ ಸೇಷಪ್ಪ ಪೂಜಾರಿಯವರ ಮೃತದೇಹವು ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶೇಷಪ್ಪ ಪೂಜಾರಿಯವರು ನಡೆದಾಡಲು ಅಶಕ್ತರಾಗಿದ್ದು ಮನೆಯಿಂದ ದೂರದ ಗುಡ್ಡ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಡುವ ಸಾಧ್ಯತೆ ಕಡಿಮೆ ಇದೆ ಎಂದು ಶುಭವತಿ ಅವರು ದೂರು ನೀಡಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಮೃತರ ಇನ್ನೋರ್ವ ಪುತ್ರಿ ಪುಷ್ಪಾವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿ ತನ್ನ ತಂದೆ ಸೇಷಪ್ಪ ಪೂಜಾರಿ ಅವರನ್ನು ಅವರ ಜಾಗವನ್ನು ಕಬಳಿಸುವ ಹುನ್ನಾರದಲ್ಲಿ ಅಥವಾ ಅವರನ್ನು ಆರೈಕೆ ಮಾಡುವುದನ್ನು ತಪ್ಪಿಸಲು ಕೊಲೆ ಮಾಡಿರುವ ಸಾಧ್ಯತೆ ಇರುವ ಕುರಿತು ದೂರು ನೀಡಿದ್ದರು.
ತನಿಖೆ ನಡೆಸಿರುವ ಪೊಲೀಸರು ಸೇಷಪ್ಪ ಪೂಜಾರಿ ಅವರ ಸಹೋದರ ಬಾಲಕೃಷ್ಣ ಪೂಜಾರಿ ಹಾಗೂ ಅವರ ಮಗ ವೇಣುಗೋಪಾಲ ಎಂಬವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.