ಆರೆಸ್ಸೆಸ್ ನಡೆ ಖಂಡಿಸಲು ದೊರೆಸ್ವಾಮಿ ಇರಬೇಕಿತ್ತು: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್

ಬೆಂಗಳೂರು, ಎ. 10: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಬದುಕಿದ್ದರೆ ಆರೆಸ್ಸೆಸ್ ನಡೆಗಳನ್ನು ನಿತ್ಯ ಖಂಡಿಸುತ್ತಿದ್ದರು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ತಿಳಿಸಿದರು.
ರವಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ಪ್ರಜಾಧಿಕಾರ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಸೇನಾನಿ ಎಚ್. ಎಸ್.ದೊರೆಸ್ವಾಮಿ ಅವರ 104ನೆ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮನುವಾದಿ ಸಂಸ್ಕೃತಿ ಹೆಚ್ಚುತ್ತಿದ್ದು, ಇದನ್ನು ಎಲ್ಲರೂ ಖಂಡಿಸಬೇಕಾಗಿದೆ.ಇನ್ನೂ, ದೊರೆಸ್ವಾಮಿ ಅವರು ರೈತರು ಮತ್ತು ಬಡವರ ಬಗ್ಗೆ ಸದಾಕಾಲ ಪ್ರೀತಿ ಇಟ್ಟುಕೊಂಡು, ಅವರ ಹಕ್ಕಿಗಾಗಿ ಧ್ವನಿ ಎತ್ತುತ್ತಲೇ ಬಂದವರು ಎಂದು ನುಡಿದರು.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಸಮಾಜದ ಪ್ರತಿ ಪಿಡುಗಿಗೂ ದೊರೆಸ್ವಾಮಿ ಅವರು ಹೋರಾಟ ನಡೆಸುತ್ತ ಬಂದರು. ಅವರ ಬದುಕೇ ನಮಗೆಲ್ಲ ಮಾದರಿಯಾಗಿದ್ದು, ಅವರ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹಿರಿಯ ಪತ್ರಕರ್ತೆ ವಿಜಯಮ್ಮಾ ಮಾತನಾಡಿ, ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಸೌಂದರ್ಯ ಸ್ಪರ್ಧೆ ನಡೆದಿತ್ತು. ಆ ಸ್ಪರ್ಧೆ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಆದರೆ ಮುಖ್ಯಮಂತ್ರಿಗಳು ಸೌಂದರ್ಯ ಸ್ಪರ್ಧೆಯನ್ನು ನಡೆಸುವ ಪಟ್ಟು ಹಿಡಿದಿದ್ದರು. ಆ ವೇಳೆ ದೊರೆಸ್ವಾಮಿ ಅವರು ಪಟೇಲರ ನಡೆ ವಿರೋಧಿಸಿ, ನೀವು ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಬೇಕಾದರೆ ಸ್ಪರ್ಧೆಗೆ ಕಳುಹಿಸಿ, ಆದರೆ ನಾವು ಇಂತಹದ್ದನ್ನು ಒಪ್ಪುವುದಿಲ್ಲ ಎಂದು ನೇರವಾಗಿ ಹೇಳಿದ್ದರು ಎಂದು ನೆನದರು.
ಪ್ರೊ.ನಗರಗೆರೆ ರಮೇಶ್ ಮಾತನಾಡಿ, ರಾಜ್ಯದಲ್ಲಿ ಕೋಮುವಾದ ವಿಜೃಂಭಿಸುತ್ತಿದೆ. ಜಾನಪದ ಜಾತ್ರೆಈಗ ಸಂಘಪರಿವಾರದ ಜಾತ್ರೆಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸೋಮಶೇಖರ್, ಹೋರಾಟಗಾರರಾದ ಸಿರಿಮನೆ ನಾಗರಾಜ್, ಗೌರಿ, ಜಗನ್, ಗಜೇಂದ್ರ, ಎಚ್.ಎಂ.ವೆಂಕಟೇಶ, ಪ್ರಭಾ ಬೆಳವಂಗಲ, ಕಾಂಗ್ರೆಸ್ ನಾಯಕಿ ಅಕ್ಕೈ ಪದ್ಮಶಾಲಿ ಸೇರಿದಂತೆ ಪ್ರಮುಖರಿದ್ದರು.







