ಇಮ್ರಾನ್ ಆಪ್ತನ ನಿವಾಸದ ಮೇಲೆ ಅಧಿಕಾರಿಗಳ ದಾಳಿ: ಪಿಟಿಐ ಆರೋಪ

PHOTO COURTESY:TWITTER
ಲಾಹೋರ್, ಎ.10: ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿ ಇಮ್ರಾನ್ಖಾನ್ ಪದಚ್ಯುತಗೊಂಡ ಕೆಲ ಘಂಟೆಗಳ ಬಳಿಕ ಇಮ್ರಾನ್ ಅವರಿಗೆ ಆಪ್ತನಾಗಿರುವ ಡಾ. ಅರ್ಸಲಾನ್ ಖಾಲಿದ್ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿ ಕುಟುಂಬದವರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಇಮ್ರಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ಆರೋಪಿಸಿದೆ. 2019ರಿಂದ ಡಾ. ಖಾಲಿದ್ ಅವರು ಇಮ್ರಾನ್ಖಾನ್ ಅವರ ಡಿಜಿಟಲ್ ಮಾಧ್ಯಮ ತಂಡದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2018ರ ಸಾರ್ವತ್ರಿಕ ಚುನಾವಣೆ ಸಂದರ್ಭ ಅವರು ಡಿಜಿಟಲ್ ಮಾಧ್ಯಮ ಪ್ರಚಾರದ ನೇತೃತ್ವ ವಹಿಸಿದ್ದರು.
ಇಮ್ರಾನ್ಖಾನ್ ಅವರಿಗೆ ಅತ್ಯಂತ ನಿಕಟವಾಗಿದ್ದ, ಡಿಜಿಟಲ್ ಮಾಧ್ಯಮ ತಂಡದ ಮುಖ್ಯಸ್ಥ ಡಾ. ಖಾಲಿದ್ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕುಟುಂಬದ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ಯಾರನ್ನೂ ನಿಂದಿಸಿಲ್ಲ ಅಥವಾ ಯಾವುದೇ ಸಂಸ್ಥೆಯ ವಿರುದ್ಧ ಆರೋಪ ಅಥವಾ ಟೀಕೆ ಮಾಡಿಲ್ಲ. ಈ ಪ್ರಕರಣದ ಬಗ್ಗೆ ಫೆಡರಲ್ ತನಿಖಾ ಸಮಿತಿ ತನಿಖೆ ನಡೆಸಬೇಕು ಎಂದು ಪಿಟಿಐ ಆಗ್ರಹಿಸಿದೆ.
ಘಟನೆಯನ್ನು ಖಂಡಿಸಿರುವ ಮಾಜಿ ಸಚಿವ ಮತ್ತು ಪಿಟಿಐ ಮುಖಂಣಡ ಅಸಾದ್ ಉಮರ್ ‘ ಡಾ. ಖಾಲಿದ್ ಅವರಂತಹ ದೇಶಭಕ್ತ ಯುವಕರು ದೇಶದ ಆಸ್ತಿಯಾಗಿದ್ದು ಅವರ ನಿವಾಸದ ಮೇಲೆ ನಡೆದ ದಾಳಿ ತೀವ್ರ ಖಂಡನೀಯ’ ಎಂದು ಟ್ವೀಟ್ ಮಾಡಿದ್ದಾರೆ.







